ಬೆಂಗಳೂರು, ಎ17(Daijiworld News/SS): ರಾಜ್ಯದಲ್ಲಿ ಮೊದಲ ಹಂತದ ಮತದಾನ ಏ.18ರಂದು ಒಟ್ಟು 14 ಕ್ಷೇತ್ರಗಳಲ್ಲಿ ನಡೆಯಲಿದೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮೊದಲ ಹಂತದ ಮತದಾನ ನಡೆಯಲಿದ್ದು, ಶಾಂತಿ ಮತ್ತು ಮುಕ್ತ ಮತದಾನಕ್ಕೆ ಚುನಾವಣಾ ಆಯೋಗ ಸಕಲ ರೀತಿಯಲ್ಲಿ ಸಜ್ಜಾಗಿದೆ.
ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳಲ್ಲಿ ಎ.18ರಂದು ಮತದಾನ ನಡೆಯಲಿದ್ದು ಇಲ್ಲಿನ ಅಭ್ಯರ್ಥಿಗಳ ಬಹಿರಂಗ ಪ್ರಚಾರಕ್ಕೆ (ಮಂಗಳವಾರ) ಸಂಜೆ 6 ಗಂಟೆಗೆ ತೆರೆಬಿದ್ದಿದೆ. ಈ ಎಲ್ಲ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಹಾಗೂ ಬಿಜೆಪಿ ಅಬ್ಬರದ ಪ್ರಚಾರ ನಡೆಸಿದ್ದು ತುಂಬ ಕುತೂಹಲ ಮೂಡಿಸಿರುವ ಕ್ಷೇತ್ರಗಳಾಗಿವೆ.
ಚುನಾವಣಾ ಸಿಬ್ಬಂದಿಗಳು, ಭದ್ರತಾ ಸಿಬ್ಬಂದಿಗಳು ನಾಳೆ ಮತಗಟ್ಟೆಗಳಿಗೆ ಮತಯಂತ್ರ ಸೇರಿದಂತೆ ಅಗತ್ಯ ಪರಿಕರಗಳೊಂದಿಗೆ ತೆರಳಲಿದ್ದಾರೆ. ಏ.18ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.
ಕರ್ನಾಟಕದಲ್ಲಿ ಎರಡನೇ ಹಂತದ ಮತದಾನ ಏ.23ಕ್ಕೆ ನಡೆಯಲಿದೆ. ಅಂದು ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಚುನಾವಣೆ ನಡೆಯಲಿದ್ದು ಅಲ್ಲಿನ ಅಭ್ಯರ್ಥಿಗಳಿಗೆ ಬಹಿರಂಗ ಪ್ರಚಾರಕ್ಕೆ ಇನ್ನೂ ಅವಕಾಶ ಇದೆ.