ಬೆಂಗಳೂರು: ನ 23 (DaijiworldNews/MR): ನಗರದ ಅರಮನೆ ಮೈದಾನದಲ್ಲಿ ನ 25 ಮತ್ತು 26ರಂದು ನಡೆಯಲಿರುವ ಬೆಂಗಳೂರು ಕಂಬಳ- ನಮ್ಮ ಕಂಬಳಕ್ಕೆ ಪೂರ್ವಭಾವಿಯಾಗಿ ಇಂದು ಕುದಿ ಕಂಬಳಕ್ಕೆ ಚಾಲನೆ ನೀಡಲಾಗಿದೆ.
ಇದೇ ಮೊದಲ ಬಾರಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಂಬಳ ನಡೆಯಲಿದ್ದು, ಕಂಬಳದ ಜೋಡು ಕರೆಗೆ ರಾಜ ಮಹಾರಾಜರ ಹೆಸರು ಇಡಲಾಗಿದೆ. ಮುಖ್ಯ ವೇದಿಕೆಗೆ ದಿವಂಗತ ನಟ ಪುನೀತ್ ರಾಜಕುಮಾರ್ ಹೆಸರು ಹಾಗೂ ಸಾಂಸ್ಕೃತಿಕ ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಲಾಗಿದೆ ಎಂದು ಕಂಬಳ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ ತಿಳಿಸಿದ್ದಾರೆ.
ಕಂಬಳ ಸಮಿತಿಯ ಅಧ್ಯಕ್ಷ ಹಾಗೂ ಪುತ್ತೂರಿನ ಶಾಸಕ ಅಶೋಕ್ ರೈ ಮಾತನಾಡಿ, ಕಂಬಳಕ್ಕೆ ಸುಮಾರು 700 ವರ್ಷಗಳ ಇತಿಹಾಸವಿದೆ. ಬೆಂಗಳೂರು ಕಂಬಳ ಯಾವುದೇ ಪಕ್ಷ, ಸಮುದಾಯಕ್ಕೆ ಸೀಮಿತವಾಗಿಲ್ಲ. ರಾಜಕೀಯ ಕಾರ್ಯಕ್ರಮವಲ್ಲ. ನಮ್ಮ ಕಂಬಳ ಪಕ್ಷಾತೀತ ಕಾರ್ಯಕ್ರಮವಾಗಿದೆ. ಎಲ್ಲ ಪಕ್ಷಗಳ ಪ್ರಮುಖರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಎಲ್ಲ ಜಾತಿ ಧರ್ಮದವರೂ ಸಹ ಈ ಆಚರಣೆಯಲ್ಲಿ ಭಾಗಿಯಾಗುತ್ತಾರೆ ಎಂದರು.
ಸುಮಾರು 15 ರಿಂದ 20 ಲಕ್ಷ ಜನ ಕರಾವಳಿ ಭಾಗದವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರೆಲ್ಲರ ಅಪೇಕ್ಷೆಯಂತೆ ರಾಜ್ಯ, ರಾಷ್ಟ್ರ ಹಾಗೂ ವಿಶ್ವಕ್ಕೆ ಕಂಬಳವನ್ನ ಪರಿಚಯಿಸುವ ದೃಷ್ಟಿಯಿಂದ ಕಂಬಳ ಆಯೋಜಿಸಿದ್ದೇವೆ. ಸುಮಾರು 220 ಜೊತೆ ಕೋಣಗಳು ನೋಂದಣಿ ಆಗಿದ್ದು, ಆ ಪೈಕಿ 200 ಕೋಣಗಳು ಕಂಬಳದಲ್ಲಿ ಭಾಗಿಯಾಗಲಿವೆ.
ಸಾಮಾನ್ಯವಾಗಿ 147 ಮೀಟರಿನ ಕರೆ ಇರುತ್ತದೆ. ಆದರೆ ಇಲ್ಲಿ 155 ಮೀಟರಿನ ಕರೆ ನಿರ್ಮಿಸಿದ್ದೇವೆ. ಸುಮಾರು 15 ಕೋಣಗಳ ಮಾಲೀಕರು ಬೆಂಗಳೂರು ಕಂಬಳಕ್ಕೆಂದೇ ಕೋಣಗಳನ್ನ ಖರೀದಿಸಿ ಭಾಗವಹಿಸುತ್ತಿರುವುದು ಮತ್ತೊಂದು ವಿಶೇಷ.
ಬೆಂಗಳೂರು ಕಂಬಳ, ಈ ಕ್ರೀಡೆಗೆ ಮತ್ತಷ್ಟು ಪ್ರೋತ್ಸಾಹ ನೀಡುವಂತಹ ಕಂಬಳವಾಗಲಿದೆ ಎಂದು ಮಾಹಿತಿ ನೀಡಿದರು.
ನ 25ರಂದು 11.10ಕ್ಕೆ ಉದ್ಘಾಟನೆಯಾಗಲಿದ್ದು, 26ರಂದು ಸಂಜೆ ಸುಮಾರು 7 ಗಂಟೆಗೆ ಕಂಬಳ ಮುಕ್ತಾಯವಾಗಲಿದೆ. ಏಳು ಸಾವಿರ ಜನ ಗ್ಯಾಲರಿಯಲ್ಲಿ ಕುಳಿತು ಕಂಬಳ ವೀಕ್ಷಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
ವಿವಿಐಪಿ, ವಿಐಪಿ, ಸಾರ್ವಜನಿಕರಿಗೆ ಪ್ರತ್ಯೇಕ ಪ್ರವೇಶದ್ವಾರ ಪಾರ್ಕಿಂಗ್ ವ್ಯವಸ್ಥೆ ಇರಲಿದೆ. ಕಂಬಳ ವೀಕ್ಷಣೆಗೆ ಯಾವುದೇ ಪಾಸ್, ಯಾವುದೇ ದುಡ್ಡು ಕೊಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಕಂಬಳದಲ್ಲಿ ಪ್ರಥಮ ಸ್ಥಾನ ಪಡೆದ ಕೋಣಗಳಿಗೆ 16 ಗ್ರಾಂ ಬಂಗಾರ, 1 ಲಕ್ಷ ರೂ. ನಗದು ಬಹುಮಾನವಿರಲಿದೆ. ದ್ವಿತೀಯ ಸ್ಥಾನ ಪಡೆದ ಕೋಣಗಳಿಗೆ 8 ಗ್ರಾಂ ಬಂಗಾರ ಹಾಗೂ 50 ಸಾವಿರ ನಗದು ಹಾಗೂ ತೃತೀಯ ಸ್ಥಾನ ಪಡೆಯುವ ಕೋಣಗಳಿಗೆ 4 ಗ್ರಾಂ ಬಂಗಾರ ಹಾಗೂ 25 ಸಾವಿರ ರೂ. ನಗದು ಬಹುಮಾನ ಇರಲಿದೆ.
ಕಂಬಳ ನಡೆಯುವ ಸಂದರ್ಭದಲ್ಲಿ 1 ಲಕ್ಷದ 26 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಅದರ ಜೊತೆಗೆ ಸುಮಾರು 180 ವಿವಿಧ ಸ್ಟಾಲ್ಗಳಲ್ಲಿ ಕರಾವಳಿ ಭಾಗದ ತಿಂಡಿ ತಿನಿಸುಗಳನ್ನ ಸವಿಯುವ ಅವಕಾಶವಿರಲಿದೆ. ಜೊತೆಗೆ ಕರಾವಳಿ ಭಾಗದ ಸಂಸ್ಕೃತಿ, ಆಹಾರ ಮುಂತಾದವುಗಳು ಅನಾವರಣಗೊಳ್ಳಲಿದೆ.