ಬೆಂಗಳೂರು, ನ 22 (DaijiworldNews/MS): ಜಮ್ಮು-ಕಾಶ್ಮೀರದ ರಾಜೋರಿಯಲ್ಲಿ ಬುಧವಾರ ಉಗ್ರರೊಂದಿಗಿನ ಗುಂಡಿನ ಚಕಮಕಿ ಹೋರಾಟದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ.
ರಾಜೌರಿ ಜಿಲ್ಲೆಯ ಕಲಕೋಟ್ ಅರಣ್ಯದಲ್ಲಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ಹುತಾತ್ಮರಾದವರ ಇಬ್ಬರು ಸೇನಾಧಿಕಾರಿಗಳ ಪೈಕಿ ಒಬ್ಬರು ಕರ್ನಾಟಕದ ಮೈಸೂರು ಮೂಲದ ಕ್ಯಾಪ್ಟನ್ ಎಂ.ವಿ ಪ್ರಾಂಜಲ್(29) ಎಂಬುದು ದೃಢಪಟ್ಟಿದೆ.
ಕ್ಯಾಪ್ಟನ್ ಪ್ರಾಂಜಲ್ ಮಂಗಳೂರಿನ ಎಂ.ಆರ್.ಪಿ.ಎಲ್ ತೈಲ ಕಂಪನಿಯಲ್ಲಿ ಹಲವು ವರ್ಷಗಳ ಕಾಲ ವ್ಯವಸ್ಥಾಪಕ ನಿರ್ದೇಶಕರಾಗಿ ನಿವೃತ್ತರಾಗಿರುವ ಎಂ. ವೆಂಕಟೇಶ್ ಅವರ ಪುತ್ರರಾಗಿದ್ದಾರೆ.
ಪ್ರಾಂಜಲ್ ಅವರು ವೆಂಕಟೇಶ್ ಅವರ ಏಕೈಕ ಪುತ್ರರಾಗಿದ್ದು, ಇವರು ಎಸ್ಎಸ್ಎಲ್ಸಿವರೆಗೆ ಸುರತ್ಕಲ್ ನ ಎಂಆರ್ಪಿಎಲ್ ಸಮೀಪದಲ್ಲೇ ಇರುವ ಡೆಲ್ಲಿ ಪಬ್ಲಿಕ್ ಸ್ಕೂಲ್ನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಬಳಿಕ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ್ದರು. ಕ್ಯಾಪ್ಟನ್ ಹುದ್ದೆಯಿಂದ ಮೇಜರ್ ಸ್ಥಾನಕ್ಕೆ ಪದೋನ್ನತಿಗೆ ಕಾಯುತ್ತಿರಬೇಕಾದರೆ ಪ್ರಾಂಜಲ್ ಅವರ ಬಲಿದಾನವಾಗಿದೆ. ಕ್ಯಾ. ಪ್ರಾಂಜಲ್ ಪಾರ್ಥಿವ ಶರೀರ ಗುರುವಾರ ಬೆಂಗಳೂರಿಗೆ ಆಗಮಿಸಲಿದ್ದು, ಬನ್ನೇರುಘಟ್ಟದಲ್ಲಿ ಸಕಲ ಮಿಲಿಟರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ.