ನವದೆಹಲಿ,ಎ16(Daijiworld News/AZM): ವಯನಾಡ್ ಅಲ್ಲಿ ರಾಹುಲ್ ಗಾಂಧಿ ಪರ ಚುನಾವಣಾ ಪ್ರಚಾರ ರ್ಯಾಲಿಯ ವೇಳೆ ಹಸಿರು ಬಾವುಟ ಬಳಸಿದ್ದಕ್ಕಾಗಿ ವಯನಾಡನ್ನು ಪಾಕಿಸ್ತಾನಕ್ಕೆ ಹೋಲಿಸಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್(ಐಯುಎಂಎಲ್) ಚುನಾವಣಾ ಆಯೋಗಕ್ಕೆ ಒತ್ತಾಯಿಸಿದೆ.
ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿದ ಇಂಡಿಯನ್ ಯೂನಿಯನ್ ಮುಸ್ಲಿಂಲೀಗ್, ಅಮಿತ್ ಶಾ ಅವರು ಆಧಾರರಹಿತ, ದುರುದ್ದೇಶಪೂರಿತ, ಬೇಜವಾಬ್ದಾರಿಯುತ, ಅವಮಾನಕಾರಿ ಮತ್ತು ಕೋಮುವಾದಿ ಹೇಳಿಕೆಯನ್ನು ನೀಡುವ ಮೂಲಕ ಎರಡು ಸಮುದಾಯಗಳ ನಡುವೆ ವೈರತ್ವ ಬೆಳೆಸುವ ಪ್ರಯತ್ನ ಮಾಡಿದ್ದಾರೆ. ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದೆ.
ಅಮಿತ್ ಶಾ ಅವರ ಈ ಹೇಳಿಕೆ ಮುಸ್ಲಿಮರು ಮಾತ್ರವಲ್ಲ ವಯನಾಡ್ನ ಜನರಿಗೆ ಮಾಡಿರುವ ಅವಮಾನ. ನಮ್ಮ ಪಕ್ಷದ ಬಾವುಟವನ್ನು ಅವರು ಪಾಕಿಸ್ತಾನದ ಧ್ವಜ ಎಂದು ಬಿಂಬಿಸಿದ್ದಾರೆ. ಜೆಡಿಯು, ಜೆಡಿಎಸ್, ಐಎನ್ಎಲ್ಡಿ, ಆರ್ಜೆಡಿ ಮುಂತಾದ ಇತರ ಪಕ್ಷಗಳು ಸಹ ಹಸಿರು ಬಾವುಟ ಹೊಂದಿವೆ. ಶಾ ಅವರು ನಮ್ಮ ಪಕ್ಷದ ಬಾವುಟವನ್ನು ಮಾತ್ರ ಉಲ್ಲೇಖಿಸುವ ಮೂಲಕ ಕೋಮು ದ್ವೇಷವನ್ನು ಬಿತ್ತುವ ಪ್ರಯತ್ನ ಮಾಡಿದ್ದಾರೆ' ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನ ರಾಷ್ಟ್ರೀಯ ಕಾರ್ಯದರ್ಶಿ ಖೊರ್ರಂ ಎ ಒಮರ್ ಆರೋಪಿಸಿದ್ದಾರೆ.