ಬೆಂಗಳೂರು ನ, 22 (DaijiworldNews/AA) : ವಿದ್ಯುತ್ ತಂತಿ ತಗುಲಿ ತಾಯಿ ಹಾಗೂ ಮಗು ಮೃತ ಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದೆ.
ಲೋಕಾಯುಕ್ತವು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕೆಆರ್ ಸರ್ಕಲ್ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ಏಳು ಜನ ಅಧಿಕಾರಿಗಳಿಗೆ ನೋಟಿಸ್ ಕಳುಹಿಸಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವಾರದಲ್ಲಿ ಸಂಪೂರ್ಣ ವರದಿ ನೀಡುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಆದೇಶಿಸಿದ್ದಾರೆ.
ಸೆಕ್ಷನ್ 7(1)(B) ಆಫ್ ಕರ್ನಾಟಕ ಲೋಕಾಯುಕ್ತ ಕಾಯ್ದೆ ಮತ್ತು ಮಾಲ್ ಅಡ್ಮಿನಿಸ್ಟ್ರೇಷನ್ 2(10) ಅಡಿಯಲ್ಲಿ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕೆಆರ್ ಸರ್ಕಲ್ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ, ಬೆಸ್ಕಾಂ ಉತ್ತರ ವಿಭಾಗದ ಮುಖ್ಯ ಅಭಿಯಂತರ, ಬೆಸ್ಕಾಂ ಪೂರ್ವ ವೃತ್ತದ ಮೇಲ್ವಿಚಾರಕ ಅಭಿಯಂತರ, ಕಾರ್ಯನಿರ್ವಾಹಕ ಅಭಿಯಂತರ ವೈಟ್ಫಿಲ್ಡ್ ವಿಭಾಗ, ಹೋಫ್ ಫಾರಂ ಸಿಗ್ನಲ್ ವೈಟ್ಫಿಲ್ಡ್ ಬೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮತ್ತು ಹೋಫ್ ಫಾರಂ ಸಿಗ್ನಲ್ ವೈಟ್ಫಿಲ್ಡ್ನ ಸಹಾಯಕ ಅಭಿಯಂತರ ವಿರುದ್ಧ ಪ್ರಕರಣ ದಾಖಲಾಗಿದೆ.
ನ. 19 ರ ಬೆಳಗ್ಗೆ 5.30 ರ ಸುಮಾರಿಗೆ ತಮಿಳುನಾಡಿನಿಂದ ಬೆಂಗಳೂರಿಗೆ ಆಗಮಿಸಿದ ಸೌಂದರ್ಯ ಹಾಗೂ ಆಕೆಯ 9 ತಿಂಗಳ ಮಗು ಸುವಿಕ್ಷಾ ಲಿಯಾನೊಂದಿಗೆ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಈ ವೇಳೆ ಫುಟ್ ಪಾತ್ ಮೇಲೆ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ತುಳಿದಿದ್ದರು. ಪರಿಣಾಮ ತಾಯಿ ಹಾಗೂ ಮಗುವಿಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.