ಮಂಡ್ಯ, ಎ.16(Daijiworld News/AZM): ಚಿತ್ರನಟ ಯಶ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಸವಾಲಾಕಿದ್ದು, ತಮ್ಮ ವಿರುದ್ಧ ಆರೋಪ ಸಾಬೀತುಪಡಿಸಿದರೆ ಈ ರಾಜ್ಯವನ್ನೇ ತ್ಯಜಿಸಲು ಸಿದ್ದವೆಂದು ಹೇಳಿದ್ದಾರೆ.
ತಮ್ಮ ಪಕ್ಷವನ್ನು ಕಳ್ಳರ ಪಕ್ಷವೆಂದು ಯಶ್ ಹೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕಿಡಿಕಾರಿದ್ದು, ಯಶ್ ಅವರು ಈ ಆರೋಪವನ್ನು ನಿರಾಕರಿಸಿದ್ದಾರೆ. ಹಾಗೂ ತಮ್ಮ ಮೇಲೆ ಆರೋಪ ಸಾಬೀತಾದರೆ ರಾಜ್ಯವನ್ನೇ ತ್ಯಜಿಸುವುದಾಗಿ ಸವಾಲಾಕಿದ್ದಾರೆ. ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪರ ನಡೆದ ಬೃಹತ್ ರ್ಯಾಲಿಯಲ್ಲಿ ಈ ಕುರಿತು ಯಶ್ ಅವರು ಮಾತನಾಡಿದರು. ಪ್ರಚಾರ ಸಭೆಯೊಂದರಲ್ಲಿ ತಮ್ಮ ಪಕ್ಷವನ್ನು ಕಳ್ಳರ ಪಕ್ಷವೆಂಬುದಾಗಿ ಮುಖ್ಯಮಂತ್ರಿ ಮಾಡಿರುವ ಆರೋಪವನ್ನು ನಿರಾಕರಿಸಿದರು. ನಮ್ಮ ವಿರುದ್ಧ ಮಾತನಾಡಿದ್ದನ್ನು ನುಂಗಿಕೊಳ್ಳುತ್ತಿದ್ದೇವೆ. ಆದರೆ, ನಮ್ಮ ಮನೆ ಹೆಣ್ಣು ಮಕ್ಕಳ ಬಗ್ಗೆ ಲಘುವಾಗಿ ಮಾತನಾಡುವವರು ಯಾವ ಸ್ಥಾನದಲ್ಲಿದ್ದರೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇನ್ನು ಮುಂದೆ ಆ ರೀತಿ ಮಾತನಾಡಬಾರದು ಎಂದು ಅವರು ಎಚ್ಚರಿಕೆ ನೀಡಿದರು.
ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಸ್ಪರ್ಧಿಸಬಹುದು. ಒಂದು ಹೆಣ್ಣು ಮಗಳು, ಅದರಲ್ಲೂ ಮಂಡ್ಯ ಜಿಲ್ಲೆಯ ಸೊಸೆ ಸ್ಪರ್ಧಿಸಿದ್ದಾರೆ. ಚುನಾವಣೆಯನ್ನು ಯಾವ ಆಧಾರದಲ್ಲಿ ನಡೆಸಬೇಕು ಎಂಬುದು ತಿಳಿಯದೆ ಕೆಟ್ಟದಾಗಿ ಮಾತನಾಡುವುದು, ಅವಹೇಳನ ಮಾಡುವುದನ್ನೇ ಚುನಾವಣಾ ವಿಷಯ ಮಾಡಿಕೊಂಡಿದ್ದಾರೆಂದು ಅವರು ಪ್ರತಿಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಂಡರು.
ಅಭಿಮಾನ ಸುಳ್ಳಲ್ಲ. ಜನರು ನಮ್ಮ ನೋಡುವುದಕ್ಕಷ್ಟೇ ಬರುವುದಿಲ್ಲ. ನಮ್ಮ ನೋಡಲು ಜನ ಬರುತ್ತಾರಂತೆ ಓಟು ಹಾಕುವುದಿಲ್ವಂತೆ, ಅವರಿಗೆ ಯಾರೂ ಬರದಿದ್ದರೂ ಓಟು ಹಾಕುತ್ತಾರಂತೆ. ಸಿನಿಮಾದವರ ನಂಬಬಾರದು ಎನ್ನುತ್ತಾರೆ. ಮತ್ತೊಂದೆಡೆ ನಾನೂ ಸಿನಿಮಾ ನಿರ್ಮಾಪಕ ಎನ್ನುತ್ತಾರೆ ಎಂದು ಸಿಎಂ ಹೇಳಿಕೆಗೆ ವ್ಯಂಗ್ಯವಾಡಿದರು.