ಹರಿಯಾಣ,ನ 21 (DaijiworldNews/RA): ವಿದೇಶದಲ್ಲಿ ಇದ್ದುಕೊಂಡು ಉತ್ತಮವಾಗಿ ಸಂಪಾದನೆ ಮಾಡಿ ಬಿಂದಾಸ್ ಆಗಿ ಲೈಫ್ ಲೀಡ್ ಮಾಡಬೇಕು ಎನ್ನುವ ಆಸೆ ಕೆಲವರದ್ದಾಗಿರುತ್ತದೆ. ಅದಕ್ಕಾಗಿ ಪ್ರಯತ್ನ ಪಟ್ಟು ಆ ಕನಸು ನನಸಾಗದೇ ಕೈ ಚೆಲ್ಲಿ ಕುಳಿತುಕೊಳ್ಳುವರು ನಮಲ್ಲಿ ಅದೆಷ್ಟೋ ಮಂದಿ ಇದ್ದಾರೆ.
ಇವತ್ತಿನಾ ಕಥಾ ನಾಯಕನ ಕಥೆ ಸ್ವಲ್ಪ ಭಿನ್ನವಾಗಿದೆ. ವಿದೇಶದಲ್ಲಿ ಉತ್ತಮ ಸಂಪಾದನೆಯ ಉದ್ಯೋಗ ಸಿಕ್ಕಿದರೂ ಅದನ್ನು ಬಿಟ್ಟು ಭಾರತಕ್ಕೆ ಬಂದು ತಮ್ಮದೇ ಆದ ಟೀ ಉದ್ಯಮವನ್ನು ಪ್ರಾರಂಭಿಸಿ ಅದರಲ್ಲಿ ಯಶಸ್ವಿಯಾಗಿ ಎಲ್ಲರೂ ಕೂಡ ಹುಬ್ಬೇರುವಂತೆ ಮಾಡಿದ ಸ್ಪೂರ್ತಿದಾಯಕ ಕಥೆ.
ಅಂದ ಹಾಗೆ ಆ ಯಶಸ್ವಿ ಸಾಧಕ ಕಮ್ ಕೋಟ್ಯಧಿಪತಿಯ ಹೆಸರು ನಿತಿನ್ ಸಲೂಜಾ. ಸ್ಟಾರ್ಬಕ್ಸ್, ಕೆಫೆ ಕಾಫಿ ಡೇ, ಕೆಫೆ ಮೋಚಾ ಮತ್ತು ಬರಿಸ್ಟಾದಂತಹ ಕಾಫಿ ಶಾಪ್ ಪ್ರಾಬಲ್ಯವಿರುವ ನಮ್ಮ ದೇಶದಲ್ಲಿ, ನಿತಿನ್ ಸಲೂಜಾ ಅವರು ಸ್ಥಾಪಿಸಿದ "ಚಾಯೋಸ್" ತನ್ನ ಹೆಸರನ್ನು ಸ್ಥಾಪಿಸಿಸಿಕೊಂಡು ಭಾರತದ ಪ್ರಮುಖ ಚಾಯ್ ಕೆಫೆಯಾಯಿತು. ಚಾಯ್ ಮಾರಾಟದ ಮೂಲಕ ಇಂದು 100 ಕೋಟಿ ವ್ಯವಹಾರವನ್ನಾಗಿ ಮಾಡಿದ್ದಾರೆ.
ಐಐಟಿ ಬಾಂಬೆ ಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡಿರುವ ಹರಿಯಾಣ ಮೂಲದ ನಿತಿನ್ ಪದವಿ ಮುಗಿದ ನಂತರ ಅಮೆರಿಕದ ಕಂಪನಿಯೊಂದರಲ್ಲಿ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಆಗಿ ಕೆಲಸಕ್ಕೆ ಸೇರಿಕೊಳ್ತಾರೆ.ಅಲ್ಲಿಯೇ ಅವರು ಸುಮಾರು 5 ವರ್ಷಗಳ ಕಾಲ ಕೆಲಸ ಮಾಡಿದರು. ಈ ವೇಳೆ ಅವರು ತಮ್ಮದೇ ಆದ ಸ್ವಂತ ಉದ್ಯಮ ಪ್ರಾರಂಭಿಸಬೇಕು ಎಂದು ಯೋಜನೆಯನ್ನು ಹಾಕಿಕೊಂಡು ಅಮೆರಿಕದಲ್ಲಿನ ಉದ್ಯೋಗ ಬಿಟ್ಟು ತನ್ನ ತಾಯಿ ನಾಡಿಗೆ ವಾಪಸ್ ಬರುತ್ತಾರೆ. ಇಲ್ಲಿ ಬಂದು ತಮ್ಮ ತಂದೆಯ ಬಳಿ ಸ್ಟಾರ್ಟಪ್ ನ್ನು ಪ್ರಾರಂಭಿಸುವ ಕನಸನ್ನು ಹೇಳ್ತಾರೆ.ಆದರೆ ಅದಕ್ಕೆ ಅವರ ತಂದೆ ಬೆಂಬಲ ನೀಡಿಲ್ಲ. ಇದಕ್ಕೆ ಬೇಸರಗೊಳ್ಳದ ನಿತಿನ್ ಅವರು ಇದನ್ನೇ ಚಾಲೆಂಜ್ ಆಗಿ ತೆಗೆದುಕೊಂಡು ಮುಂದುವರಿಯುತ್ತಾರೆ.ಎಲ್ಲರೂ ಅಂದುಕೊಳ್ಳುವ ಹಾಗೆ ಈ ಯೋಜನೆಯನ್ನು ನಿತಿನ್ ಸಲೂಜಾ ಅವರು ಸಮ್ಮನೆ ಹಾಕಿಕೊಂಡಿಲ್ಲ, ಅದಕ್ಕೆ ಒಂದು ಕಾರಣನೂ ಇದೆ. ಅಮೆರಿಕದಲ್ಲಿ ಒಂದು ಕಪ್ ಟೀ ಕುಡಿಯಬೇಕಾದರೆ ಪರದಾಡುವಂತಹ ಸ್ಥಿತಿಯನ್ನು ನಿತಿನ್ ಗಮನಿಸುತ್ತಾರೆ.
ಹೀಗಾಗಿ ಭಾರತದಲ್ಲಿ ಟೀ ಮಾರಾಟ ಮಾಡಿ ಉತ್ತಮ ಸಂಪಾದನೆ ಮಾಡಿ ಜೀವನ ಕಂಡುಕೊಳ್ಳಬಹುದು ಎಂಬ ಯೋಚನೆ ಮಾಡ್ತಾರೆ. ಇಲ್ಲಿ ಈಗಾಗಲೇ ಸಾಕಷ್ಟು ಕೆಫೆಗಳು ತಲೆಯೆತ್ತಿವೆ. ಆದರೆ ಕೆಲವೆಡೆ ಕಾಫಿ ಮಾತ್ರ ಸಿಗುತ್ತವೆ ಎಂಬುದನ್ನು ಕೂಡ ಅರಿತುಕೊಂಡು ತಮ್ಮ ಕನಸನ್ನು ನನಸು ಮಾಡುವತ್ತ ಹೆಜ್ಜೆ ಹಾಕುತ್ತಾರೆ.
ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾದ ಅವರು ಸಹೋದ್ಯೋಗಿ ,ಸ್ನೇಹಿತ ರಾಘವ್ ವರ್ಮಾ ಜೊತೆಗೆ ಅವರು ಗುರ್ಗಾಂವ್ನ ಸೈಬರ್ ಸಿಟಿಯಲ್ಲಿ ಮೊದಲ ಚಾಯೋಸ್ ಅಂಗಡಿಯನ್ನು ತೆರೆಯುತ್ತಾರೆ. ಮಾತ್ರವಲ್ಲ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯೂ ಆಗುತ್ತಾರೆ.ಇದು ಅವರಿಗೆ ಮತ್ತಷ್ಟು ಟೀ ಕೆಫೆಗಳ ಶಾಖೆಗಳನ್ನು ತೆರೆಯಲು ದಾರಿ ಮಾಡಿ ಕೊಟ್ಟಿತು. ಇವರ ಶಾಖೆ ಬೆಂಗಳೂರಿನಲ್ಲಿಯೂ ಕಾರ್ಯಾಚರಿಸುತ್ತಿದೆ.
ಒಟ್ಟಿನಲ್ಲಿ ಇಂದು ಇವರ ಚಾಯೋಸ್ ದೇಶಾದ್ಯಂತ 200ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, ಸುಮಾರು 2051 ಕೋಟಿ ರೂ. ಆದಾಯ ಗಳಿಸುತ್ತಿದೆ. ಸದ್ಯ ಇವರ ಈ ಹೆಜ್ಜೆಯೇ ಜೀವನವನ್ನೇ ಬದಲಿಸಿದ್ದು ಕೋಟ್ಯಧಿಪತಿಯಾಗಿ ಗುರುತಿಸಿಕೊಂಡಿದ್ದಾರೆ. ಆ ಮೂಲಕ ಸಾಧಿಸುವ ಹಂಬವಿರುವ ಸಾಧಕರಿಗೆ ಮಾದರಿಯಾಗಿ ನಿಂತಿದ್ದಾರೆ.