ಉತ್ತರಾಖಂಡ, ನ 21 (DaijiworldNews/MR): ಅಮ್ಮ ನನ್ನ ಬಗ್ಗೆ ಚಿಂತಿಸಬೇಡ, ನಾನು ಚೆನ್ನಾಗಿದ್ದೇನೆ, ದಯವಿಟ್ಟು ನೀವು ಮತ್ತು ಅಪ್ಪ, ಸಮಯಕ್ಕೆ ಸರಿಯಾಗಿ ಊಟ ಮಾಡಿ, ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ ಕಳೆದ 10 ದಿನಗಳಿಂದ ಉತ್ತರಾಖಂಡದ ಉತ್ತರಕಾಶಿಯಲ್ಲಿ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರೊಬ್ಬರು ತಮ್ಮ ತಾಯಿಗೆ ತಲುಪಿಸಿದ ಭಾವುಕ ಸಂದೇಶ ಇದಾಗಿತ್ತು.
ಸಿಲ್ಕಿಯಾರ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರಿಗೆ ಕಳೆದ 10 ದಿನಗಳಿಂದ 6 ಇಂಚಿನ ಪೈಪ್ ಮೂಲಕ ನೀರು, ಆಹಾರ ನೀಡಲಾಗುತ್ತಿದೆ. ಇದೀಗ ಕಾರ್ಮಿಕರು ಸುರಕ್ಷಿತರಾಗಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಲು ಪೈಪ್ ಮೂಲಕ ಎಂಡೋಸ್ಕೋಪಿ ಕ್ಯಾಮೆರಾವನ್ನ ಸುರಂಗದೊಳಗೆ ಕಳುಹಿಸಲಾಗಿದ್ದು, ಕಾರ್ಮಿಕರ ದೃಶ್ಯಗಳನ್ನ ಸೆರೆಹಿಡಿಯಲಾಗಿದೆ. ಸ್ವಲ್ಪ ಸಮಯದ ನಂತರ ಕಾರ್ಮಿಕರೊಂದಿಗೆ ಸಂವಹನ ನಡೆಸಲಾಗಿದ್ದು, ಇದರಿಂದ ಕಾರ್ಮಿಕರ ರಕ್ಷಣೆಗೆ ಪರಿಹಾರ ಸಿಕ್ಕಂತಾಗಿದೆ.
ರಕ್ಷಣಾ ತಂಡದ ಅಧಿಕಾರಿಗಳು ಸುರಂಗದಲ್ಲಿ ಸಿಲುಕಿಕೊಂಡವರೊಂದಿಗೆ ಸಂವಹನ ನಡೆಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಈ ವೇಳೆ ಸುರಂಗದಲ್ಲಿ ಸಿಲುಕಿದ ಕಾರ್ಮಿಕರಲ್ಲಿ ಒಬ್ಬರಾದ ಜೈದೇವ್, ಮೇಲ್ವಿಚಾರಕರೊಂದಿಗೆ ಮಾತನಾಡುತ್ತಾ ತನ್ನ ಹೇಳಿಕೆಯನ್ನು ರೆಕಾರ್ಡ್ ಮಾಡುವಂತೆ ಕೇಳಿಕೊಂಡಿದ್ದಾರೆ. ಬಳಿಕ ಹೇಳಿಕೆಯನ್ನು ತನ್ನ ತಾಯಿಗೆ ತಲುಪಿಸುವಂತೆ ಕೋರಿಕೊಂಡಿದ್ದಾರೆ. ಮೇಲ್ವಿಚಾರಕರು ಕಾರ್ಮಿಕನ ಹೇಳಿಕೆ ರೆಕಾರ್ಡ್ ಮಾಡುತ್ತಿದ್ದಂತೆ, ಕಾರ್ಮಿಕ ಭಾವುಕ ನುಡಿಗಳನ್ನಾಡಿದ್ದಾರೆ. ಬಳಿಕ ಮೇಲ್ವಿಚಾರಕರು ಚಿಂತಿಸಬೇಡಿ ಶೀಘ್ರದಲ್ಲೇ ಸ್ಥಳಾಂತರಿಸುವುದಾಗಿ ಭರವಸೆ ನೀಡಿದ್ದಾರೆ.
ಸದ್ಯ ರಕ್ಷಣಾ ಅಧಿಕಾರಿಗಳು ವಾಕಿ ಟಾಕೀಸ್ ಮೂಲಕ ಕೆಲ ಕಾರ್ಮಿಕರೊಂದಿಗೆ ಮಾತನಾಡಿದ್ದಾರೆ. ಸೆರೆಹಿಡಿಯಲಾದ ವೀಡಿಯೋದಲ್ಲಿ ರಕ್ಷಣಾ ಅಧಿಕಾರಿಗಳು ಕಾರ್ಮಿಕರಿಗೆ ಕ್ಯಾಮೆರಾ ಮುಂದೆ ಬರುವಂತೆ ಕೇಳಿರುವುದು ಕಂಡುಬಂದಿದೆ. ಕಾರ್ಮಿಕರಿಗೆ ಮೊಬೈಲ್, ಚಾರ್ಜರ್ಗಳನ್ನು ಪೈಪ್ ಮೂಲಕ ಕಳುಹಿಸಲಾಗುವುದು ಎಂದು ರಕ್ಷಣಾ ಕಾರ್ಯಾಚರಣೆ ಉಸ್ತುವಾರಿ ಕರ್ನಲ್ ದೀಪಕ್ ಪಾಟೀಲ್ ಹೇಳಿದ್ದಾರೆ.