ಬೆಂಗಳೂರು, ನ 21 (DaijiworldNews/MS): ನಾನು ವಿದ್ಯಾರ್ಥಿಯಾಗಿದ್ದಾಗ ಶಿಕ್ಷಣದ ಕಡೆ ಹೆಚ್ಚು ಗಮನ ಕೊಡಲಿಲ್ಲ. ನನ್ನ 48ನೇ ವಯಸ್ಸಿಗೆ ನಾನು ಪದವೀಧರನಾದೆ. ಮಂತ್ರಿಯಾಗಿದಕ್ಕಿಂತ ನನಗೆ ಪದವಿಧರನಾದಾಗ ಹೆಚ್ಚು ಸಂತೋಷವಾಯಿತು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಜಯ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಡಿಸಿಎಂ ಈ ಹಿಂದೆ ಇದ್ದ ಗುರು ಶಿಷ್ಯರ ಸಂಬಂಧವೇ ಬೇರೆ, ಈಗಿರುವ ಗುರು ಶಿಷ್ಯರ ಸಂಬಂಧವೇ ಬೇರೆ. “ತ್ರೇತದೊಳ ಗುರುವು ಶಿಷ್ಯಗೆ ಜಂಗಿಸಿ ವಿದ್ಯೆ ಕಲಿಸಿ ಮಹಾಪ್ರಸಾದಂಗೆ, ದ್ವಾಪರದೊಳ್ ಗುರುವು ಶಿಷ್ಯಗೆ ದಂಡಿಸಿ ವಿದ್ಯೆ ಕಲಿಸಿ ಮಹಾಪ್ರಸಾದಂಗೆ, ಆದರೆ ಕಲಿಯುಗದೊಳ್ ಗುರುವು ಶಿಷ್ಯಂಗೆ ವಂದಿಸಿ ವಿದ್ಯೆ ಕಲಿಸಿ ಮಹಾಪ್ರಸಾದಂಗೆ” ಎಂಬ ಮಾತಿದೆ.
ಅಂದರೆ, ತ್ರೇತಾಯುಗದಲ್ಲಿ ಗುರುಗಳು ಶಿಷ್ಯರನ್ನು ಚಚ್ಚಿ ಪಾಠ ಕಲಿಸಿದರೂ ಅದನ್ನು ಪ್ರಸಾದವೆಂದು ಸ್ವೀಕಾರ ಮಾಡುತ್ತಿದ್ದರು. ದ್ವಾಪರ ಯುಗದಲ್ಲಿ ಗುರುಗಳು ದಂಡಿಸಿದರೆ ಅದನ್ನೇ ಮಹಾಪ್ರಸಾದವೆಂದು ಸ್ವೀಕರಿಸುತ್ತಿದ್ದರು. ಆದರೆ ಈಗ ಕಲಿಯುಗದಲ್ಲಿ ಗುರುಗಳು ವಿದ್ಯಾರ್ಥಿಗಳಿಗೆ ಮನವಿ ಮಾಡಿ ಕಲಿಸಬೇಕಾದ ಪರಿಸ್ಥಿತಿ ಇದೆ. ನಾವು ಈ ಸಂದರ್ಭದಲ್ಲಿ ಇದ್ದೇವೆ.
ಶಾಲೆಯಲ್ಲಿ ವಿದ್ಯೆ ಕಲಿಸುವವರು ಮಾತ್ರ ಶಿಕ್ಷಕರಲ್ಲ. ನಮ್ಮ ತಪ್ಪುಗಳನ್ನು ಗುರುತಿಸಿ ಬುದ್ಧಿ ಹೇಳುವವರು ಶಿಕ್ಷಕರು. ಹೀಗಾಗಿ ನಮಗೆ ಸಹಾಯ ಮಾಡುವವರನ್ನು ನಾವು ಮರೆಯಬಾರದು. ನಾವು ನಮ್ಮ ಮೂಲ ಮರೆತರೆ ಯಶಸ್ಸು ಸಾಧಿಸಲು ಆಗುವುದಿಲ್ಲ. ತಾಯಿಯೆ ನಮಗೆ ಮೊದಲ ಗುರು. ಹೀಗಾಗಿ ನಾವು ಸದಾ ಅವಳನ್ನು ನೆನೆಯುತ್ತೇವೆ. ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ದೇವರ ನೆನಪು ಭಕ್ತಿಯ ಮೂಲ, ಈ ಮೂರರ ನೆನಪು ಮನುಷ್ಯತ್ವಕ್ಕೆ ಮೂಲ, ಮನುಷ್ಯತ್ವ ಮೋಕ್ಷಕ್ಕೆ ಮೂಲ. ಅದರಂತೆ ನೀವು ಇವರನ್ನು ನೆನೆದು ಬದುಕಬೇಕು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಎಂಬ ಆಧಆರಸ್ತಂಭಗಳಿವೆ. ಅದೇ ರೀತಿ ನಮ್ಮ ಸಮಾಜದಲ್ಲಿ ಕೃಷಿಕ, ಶಿಕ್ಷಕ, ಸೈನಿಕ ಹಾಗೂ ಶ್ರಮಿಕ ಬಹಳ ಮುಖ್ಯವಾದ ಅಂಗಗಳು. ನೀವು ನಿಮ್ಮ ಜೀವನದಲ್ಲಿ ನಾಲ್ಕು ಡಿ ಗಳನ್ನು ಅಳವಡಿಸಿಕೊಳ್ಳಬೇಕು. ನೀವು ಕನಸು ಕಾಣಬೇಕು (Dream), ಕನಸು ಸಾಕಾರಗೊಳಿಸಲು ಆಸೆ (Desire)ಪಡಬೇಕು. ಆ ಕನಸಿಗಾಗಿ ಬದ್ಧತೆ (Dedicate) ಇರಬೇಕು. ಆ ಕನಸಿನ ಸಾಕಾರಕ್ಕೆ ಶಿಸ್ತು (Discipline) ಹೊಂದಿರಬೇಕು. ಆಗ ನೀವು ದೇಶಕ್ಕೆ ಆಸ್ತಿಯಾಗಿ ಬೆಳೆಯಲು ಸಾಧ್ಯ. ಎಂದು ಹೇಳಿದರು.