ಫತೇಪುರ,ಎ16(Daijiworld News/AZM):ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಬೂತ್ಗಳ ಒಳಗೆ ಕ್ಯಾಮೆರಾ ಇರಿಸಿದ್ದು, ಯಾರು ಯಾರಿಗೆ ಮತ ಹಾಕಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತಾರೆ ಹಾಗೂ ಬಿಜೆಪಿಗೆ ಮತ ಹಾಕದೆ ಇರುವವರಿಗೆ ಉದ್ಯೋಗ ನೀಡಲಾಗುವುದಿಲ್ಲ ಎನ್ನುವ ಹೇಳಿಕೆ ಮೂಲಕ ಫತೇಹ್ಪುರ ಕ್ಷೇತ್ರದ ಬಿಜೆಪಿ ಶಾಸಕ ರಮೇಶ್ ಖತಾರಾ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಅವರು ದಾಹೋದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಸ್ವಂತ್ ಸಿನ್ಹ ಭಭೋರ್ ಅವರ ಪರ ಪ್ರಚಾರ ಮಾಡುವ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ. ಮತಗಟ್ಟೆಗಳ ಒಳಗೆ ಪ್ರಧಾನಿ ನರೇಂದ್ರ ಮೋದಿ ಅವರು ಕ್ಯಾಮೆರಾಗಳನ್ನು ಅಳವಡಿಸಿರುವುದರಿಂದ ಈ ಬಾರಿ ಯಾವುದೇ ಲೋಪಗಳಾಗಲು ಅವಕಾಶ ಇರುವುದಿಲ್ಲ. ಯಾರು ಮತ ಹಾಕುವುದಿಲ್ಲವೋ ಅಥವಾ ಕಾಂಗ್ರೆಸ್ಗೆ ಮತ ಹಾಕುತ್ತಾರೆಯೋ ಅವರನ್ನು ಗುರುತಿಸಲಾಗುತ್ತದೆ. ಅವರಿಗೆ ಕೆಲಸ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಆಧಾರ್ ಮತ್ತು ಇತರೆ ಕಾರ್ಡ್ಗಳಲ್ಲಿ ನಿಮ್ಮ ಫೋಟೊ ಇರುತ್ತವೆ. ನಿಮ್ಮ ಬೂತ್ಗಳಲ್ಲಿ ಮತಗಳು ಕಡಿಮೆಯಾದರೆ ಯಾರು ಮತ ಹಾಕಿಲ್ಲ ಎನ್ನುವುದು ಅವರಿಗೆ ಗೊತ್ತಾಗುತ್ತದೆ. ಅವರಿಗೆ ಕೆಲಸ ಸಿಗುವುದಿಲ್ಲ ಎಂದಿದ್ದಾರೆ.