ವಿಜಯಪುರ, ನ 21 (DaijiworldNews/HR): ರಾಜಕೀಯ ವ್ಯವಸ್ಥೆಯಲ್ಲಿ ಬೆಂಬಲಿಗರಿಗೆ ತಮ್ಮ ನಾಯಕ ಉನ್ನತ ಸ್ಥಾನಕ್ಕೆ ಹೋಗಬೇಕು ಎಂಬ ಭಾವನೆ ಇರುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಕೈಗೊಳ್ಳುವ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದ್ದಾರೆ.
ಸವದತ್ತಿ ಶಾಸಕ ವೈದ್ಯ ಅವರು ಸತೀಶ ಜಾರಕಿಹೊಳಿ ಮುಖ್ಯಮಂತ್ರಿಯಾಗಬೇಕು ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯದಲ್ಲಿ ನಮ್ಮ ಬೆಂಬಲಿಗರಿಗೆ ರಾಜಕೀಯದಲ್ಲಿ ನಮ್ಮ ನಾಯಕ, ಶಾಸಕ, ಸಂಸದ, ಸಚಿವ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಬೇಕು ಎಂದೆಲ್ಲ ಅನೇಕ ಆಸೆ ಇರಿಸಿಕೊಂಡಿರುತ್ತಾರೆ. ಅವರ ಭಾವನೆಗಳನ್ನು ತಡೆಯಲು ಆಗದು. ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಕೈಗೊಳ್ಳುವ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದರು.
ಇನ್ನು ಕರ್ನಾಟಕದಲ್ಲಿ ಪ್ರಸ್ತುತ ಸಂದರ್ಭದಲ್ಲಿ ಭೀಕರ ಬರ ಆವರಿಸಿದೆ. ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವ ಕುರಿತು ನಮ್ಮ ಆದ್ಯತೆ ಇದೆಯೇ ಹೊರತು, ಉಪ ಮುಖ್ಯಮಂತ್ರಿ ಸ್ಥಾನಗಳ ಹೆಚ್ಚಳದ ಕುರಿತು ಅಲ್ಲ ಎಂದು ಹೇಳಿದ್ದಾರೆ.