ನವದೆಹಲಿ, ನ 21 (DaijiworldNews/AA) : ಯುವಜನತೆಯಲ್ಲಿ ಹೆಚ್ಚುತ್ತಿರುವ ಹಠಾತ್ ಸಾವಿನ ಹೆಚ್ಚಳಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಅಧ್ಯಯನ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ಯುವಕರು ಹೃದಯಾಘಾತದಿಂದ ಸಾವನ್ನಪ್ಪುವ ಪ್ರಕರಣ ಹೆಚ್ಚಾಗಿದೆ. ಇದಕ್ಕೆಲ್ಲ ಕಾರಣ ಕೋವಿಡ್ ಲಸಿಕೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು.
ಇದೀಗ ಐಸಿಎಂಆರ್ ನೀಡಿರುವ ಈ ವರದಿ ಗಮನಾರ್ಹವಾಗಿದೆ. ಅಷ್ಟೇ ಅಲ್ಲದೇ ಜನರ ಜೀವನಶೈಲಿಯಲ್ಲಿನ ಬದಲಾವಣೆಯೇ ಹಠಾತ್ ಸಾವಿಗೆ ಕಾರಣ ಎಂದು ಐಸಿಎಂಆರ್ ನ ವರದಿ ತಿಳಿಸಿದೆ.
ಅಕ್ಟೋಬರ್ 1, 2021 ರಿಂದ ಮಾರ್ಚ್ 31, 2023 ರವರೆಗೆ ದೇಶದ 47 ಆಸ್ಪತ್ರೆಗಳ ಮೇಲೆ ಕೇಂದ್ರೀಕರಿಸಿ ಐಸಿಎಂಆರ್ ಅಧ್ಯಯನ ನಡೆಸಿದೆ. ಅಧ್ಯಯನವನ್ನು ಪ್ರೆಮುಖವಾಗಿ 18 ರಿಂದ 45 ವರ್ಷ ವಯಸ್ಸಿನ ಜನರನ್ನು ಕೇಂದ್ರವಾಗಿಟ್ಟುಕೊಂಡು ಮಾಡಲಾಗಿದೆ. ಅಧ್ಯಯನದಲ್ಲಿ ವ್ಯಕ್ತಿಗಳು ಯಾವುದೇ ಕಾಯಿಲೆಯಿಂದ ಬಳಲದೆ ಹಠಾತ್ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಸುಮಾರು 729 ಪ್ರಕರಣಗಳನ್ನು ತೆಗೆದುಕೊಂಡು ಐಸಿಎಂಆರ್ ಅಧ್ಯಯನ ನಡೆಸಿದೆ.ಐಸಿಎಂಆರ್ ನ ಅಧ್ಯಯನದ ಪ್ರಕಾರ ಎರಡು ಡೋಸ್ ಕೋವಿಡ್ ಲಸಿಕೆಯನ್ನು ಪಡೆದವರು ಹಠಾತ್ ಸಾವಿನ ಅಪಾಯವನ್ನು ಕಡಿಮೆ ಹೊಂದಿದ್ದು, ಜೊತೆಗೆ ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆಯನ್ನು ಪಡೆದವರು ಹಠಾತ್ ಸಾವಿನಂತಹ ಅಪಾಯದಿಂದ ಪಾರಾಗಿರುತ್ತಾರೆ ಎಂದು ಹೇಳಿದೆ.