ನವದೆಹಲಿ,ಎ16(Daijiworld News/AZM): :ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಎನ್ ಡಿ ತಿವಾರಿಯವರ ಮಗ ರೋಹಿತ್ ಶೇಖರ್ ತಿವಾರಿಯವರು ಇಂದು ಮೃತಪಟ್ಟಿದ್ದು, ಸಾವಿಗೆ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ.
ದಕ್ಷಿಣ ದೆಹಲಿ ಡಿಸಿಪಿ ವಿಜಯ್ ಕುಮಾರ್ ಅವರು ರೋಹಿತ್ ಶೇಖರ್ ಅವರ ಸಾವನ್ನು ಖಚಿತಪಡಿಸಿದ್ದು,ಮೃತದೇಹವನ್ನು ಮ್ಯಾಕ್ಸ್ ಸಾಕೇತ್ ಆಸ್ಪತ್ರೆಗೆ ತರಲಾಗಿದೆ. ಹೆಚ್ಚಿನ ವಿವರಗಳಿಗೆ ಕಾಯುತ್ತಿದ್ದೇವೆ' ಎಂದು ಅವರು ಹೇಳಿಕೆ ನೀಡಿದ್ದಾರೆ. ದೆಹಲಿಯ ರಕ್ಷಣಾ ಕಾಲೋನಿಯಲ್ಲಿ ರೋಹಿತ್ ಶೇಖರ್ ನೆಲೆಸಿದ್ದು,ಏಕಾಏಕಿ ರೋಹಿತ್ ಅವರ ಮೂಗುಗಳಲ್ಲಿ ರಕ್ತ ಸುರಿಯತೊಡಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಎನ್ಡಿ ತಿವಾರಿ ಅವರ ವಿರುದ್ಧ ರೋಹಿತ್ ಶೇಖರ್ ತಿವಾರಿ ಸುದೀರ್ಘ ಕಾಲ ಕಾನೂನು ಹೋರಾಟ ನಡೆಸಿದ್ದರು. ರೋಹಿತ್ ಅವರು ತಾವು ಎನ್ ಡಿ ತಿವಾರಿ ಅವರ ಮಗ ಎಂದು ಪ್ರತಿಪಾದಿಸಿದ್ದರು. ಆದರೆ, ಇದನ್ನು ಎನ್ ಡಿ ತಿವಾರಿ ನಿರಾಕರಿಸಿದ್ದರು. ರೋಹಿತ್ ತಮ್ಮ ಮಗ ಎಂಬುದನ್ನು ಒಪ್ಪದ ಎನ್ ಡಿ ತಿವಾರಿ ಕಾನೂನು ಸಮರ ಎದುರಿಸಿದ್ದರು. ಅನೇಕ ದೂರು, ವಿಚಾರಣೆಗಳು ಮತ್ತು ಡಿಎನ್ಎ ಪರೀಕ್ಷೆಯ ಬಳಿಕ ಅವರು ಕೊನೆಗೂ ರೋಹಿತ್ ತಮ್ಮ ಪುತ್ರ ಎಂಬುದನ್ನು ಒಪ್ಪಿಕೊಂಡಿದ್ದರು.
2007ರಲ್ಲಿ ರೋಹಿತ್ ದಾವೆ ದಾಖಲಿಸಿದ್ದರು. ಡಿಎನ್ಎ ವರದಿಯಲ್ಲಿ ರೋಹಿತ್ ಅವರು ತಿವಾರಿ ಅವರಿಂದಲೇ ಜನಿಸಿದ ಮಗ ಎನ್ನುವುದು ದೃಢಪಟ್ಟಿತ್ತು.
ಕಾಂಗ್ರೆಸ್ ಮುಖಂಡರಾಗಿದ್ದ ಎನ್ ಡಿ ತಿವಾರಿ ಅವರು 2018ರ ಅಕ್ಟೋಬರ್ 18ರಂದು ಮೃತಪಟ್ಟಿದ್ದರು.