ಬೆಳಗಾವಿ, ನ 20 (DaijiworldNews/AA) : ಕಳೆದ ಆರು ತಿಂಗಳಲ್ಲಿ ಪೊಲೀಸರ ಮೇಲೆ ಆರೋಪ ಕೇಳಿ ಬಂದ ಐನೂರು ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸಿದ್ದೇನೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವೊಮ್ಮೆ ಅಮಾಯಕ ಪೊಲೀಸ್ ಸಿಬ್ಬಂದಿ ಮೇಲೆ ಆರೋಪ ಕೇಳಿ ಬಂದಿರುತ್ತದೆ. ಅಲ್ಲದೇ ಕೆಲವು ಕಡೆ ಪೊಲೀಸರೇ ತಪ್ಪು ಮಾಡಿರುತ್ತಾರೆ. ಹಾಗಾಗಿ ಪ್ರತಿಯೊಂದು ಕೇಸ್ಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಇನ್ನು ಬೆಳಗಾವಿ ನಗರ ಮತ್ತು ಗ್ರಾಮೀಣ ಭಾಗದ ಪರಿಶೀಲನೆ ಮಾಡಿದ್ದೇನೆ. ಅನೇಕ ವಿಚಾರಗಳು ಗಮನಕ್ಕೆ ಬಂದಿವೆ. ಅಪರಾಧಗಳ ಸಂಖ್ಯೆ ಗಂಭೀರವಾಗಿ ಪರಿಗಣಿಸಿದ್ದೇನೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿವೆ. ಈ ವರ್ಷ 2,500ಕ್ಕೂ ಅಧಿಕ ರಸ್ತೆ ಅಪಘಾತಗಳು ಸಂಭವಿಸಿದ್ದು, 550 ಜನ ಸಾವನ್ನಪ್ಪಿದ್ದಾರೆ.
ಹಾಗಾಗಿ ಇದನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ತಿಳಿಸಿದ್ದೇನೆ ಎಂದು ಹೇಳಿದರು.