ಬೆಂಗಳೂರು,ನ 20(DaijiworldNews/AK): ಹೆಚ್ಡಿ ದೇವೇಗೌಡ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಇರುತ್ತಾರೋ ಇಲ್ಲವೋ ಅನ್ನುವುದು ಅನುಮಾನವಿದೆ ಎಂದು ಸಿಎಂ ಇಬ್ರಾಹಿಂ ಅಚ್ಚರಿ ಮೂಡಿಸುವ ಹೇಳಿಕೆ ನೀಡಿದ್ದಾರೆ.
ಜೆಡಿಎಸ್ ಪಕ್ಷದಿಂದ ಅಮಾನತುಗೊಂಡ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಅವರು, ನಾನು ಈಗಲೂ ಜೆಡಿಎಸ್ ರಾಜ್ಯಾಧ್ಯಕ್ಷನೇ. ದೇವೇಗೌಡರೇ ರಾಷ್ಟ್ರಾಧ್ಯಕ್ಷರಾಗಿ ಇರ್ತಾರಾ ಇಲ್ಲವೋ ಎಂಬ ಅನುಮಾನವಿದೆ. ಆ ಬಗ್ಗೆ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ನಿರ್ಧಾರ ಆಗಲಿದೆ ಎಂದು ಹೇಳಿದರು.
ರಾಷ್ಟ್ರೀಯ ಕಾರ್ಯಕಾರಣಿ ನಿರ್ಧಾರ ಕೈಗೊಂಡರೆ ಏನು ಮಾಡುತ್ತಾರೆ . ರಾಷ್ಟ್ರೀಯ ಕಾರ್ಯಕಾರಣಿ ಸಭೆ ಮಾಡಿ ಸ್ಥಾನದಿಂದ ತೆಗೆದುಹಾಕಿದರೆ ಏನು ಮಾಡುತ್ತೀರಿ? ಮಗನಿಗಾಗಿ ಈ ತರ ಮಾಡಿದ್ರೆ ಏನು ಮಾಡ್ತೀರಾ? ಈಗಲೂ ಮನವಿ ಮಾಡುತ್ತೇವೆ, ನಿರ್ಣಯವನ್ನು ವಾಪಸ್ ಪಡೆಯಿರಿ ಎಂದು ಇಬ್ರಾಹಿಂ ಅವರು ದೇವೇಗೌಡರನ್ನು ಒತ್ತಾಯಿಸಿದ್ದಾರೆ.
ಕುಮಾರಸ್ವಾಮಿ ಅವರನ್ನು ರಾಜ್ಯ ಘಟಕದ ಅಧ್ಯಕ್ಷರಾಗಿ ಮಾಡಿದ್ದು ಮೊದಲ ತಪ್ಪು. ಅಮಾನತು ಮಾಡಲು ನನಗೆ ನೋಟಿಸ್ ಕೊಟ್ಟಿದ್ದಾರಾ ಎಂದು ಹೆಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.ಅಮಾನತು ಮಾಡುವ ಬಗ್ಗೆ ನನಗೆ ನೋಟಿಸ್ ಕೊಟ್ಟಿಲ್ಲ. ನಾನೇನು ಅವರ ಮನೆ ಕೆಲಸದವನಾ? ಏನು ಹುಚ್ಚಾಟ. ಈ ಬಗ್ಗೆ ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ಇಬ್ರಾಹಿಂ ಎಚ್ಚರಿಕೆ ನೀಡಿದ್ದಾರೆ
ರೆಸಾರ್ಟ್ನಲ್ಲಿ 8ರಿಂದ 10 ಜನ ಸಭೆ ಮಾಡುವುದಲ್ಲ. ನ್ಯಾಷನಲ್ ಕೌನ್ಸಿಲ್ ಮೆಂಬರ್ನಲ್ಲಿ 26 ಜನ ಇವರ ಮನೆಯವರೇ ಇದ್ದಾರೆ ಎಂದು ದೇವೇಗೌಡರು ಹಾಗೂ ಕುಮಾರಸ್ವಾಮಿ ವಿರುದ್ಧ ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವ ಮತ್ತು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಆರೋಪದ ಮೇಲೆ ಸಿಎಂ ಇಬ್ರಾಹಿಂ ಅವರನ್ನು ಶುಕ್ರವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್ಡಿ ದೇವೇಗೌಡ ಅಮಾನತುಗೊಳಿಸಿದ್ದರು.