ಬೆಂಗಳೂರು, ನ 20(DaijiworldNews/AK): ಬಿಜೆಪಿ ಕಾರ್ಯಕರ್ತ, ಕಳೆದ ಚುನಾವಣೆಯಲ್ಲಿ ಸ್ಪಲ್ಪ ಮತಗಳಿಂದ ಸೋತ ಮಣಿಕಂಠ ರಾಠೋಡ್ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯುವಂತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಆಗ್ರಹಿಸಿದರು.
ಮೈಸೂರು ಪ್ರವಾಸದಲ್ಲಿರುವ ಅವರು ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಪ್ರಿಯಾಂಕ್ ಖರ್ಗೆ ಮಧ್ಯರಾತ್ರಿ ರಾಠೋಡ್ ಮೇಲೆ ರಾಜಕೀಯ ಪುಡಾರಿಗಳ ಮೂಲಕ ಹಲ್ಲೆ ಮಾಡಿಸಿದ್ದಾರೆ. ಪ್ರಿಯಾಂಕ್ ಖರ್ಗೆಯವರು ಶಾಶ್ವತ ಅಧಿಕಾರದ ಭ್ರಮೆಯಲ್ಲಿದ್ದಾರೆ. ಅವರ ಸ್ವಕ್ಷೇತ್ರ, ಗುಲ್ಬರ್ಗ ಜಿಲ್ಲೆ, ಕಲ್ಯಾಣ ಕರ್ನಾಟಕದ ಘಟನೆಗಳನ್ನು ನೋಡಿದರೆ ಗೂಂಡಾಗರ್ದಿಗೂ ಇವರಿಗೂ ಏನೂ ವ್ಯತ್ಯಾಸ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅದು ಅಕ್ಕಪಕ್ಕದ ಜಿಲ್ಲೆಗಳಿಗೂ ವ್ಯಾಪಿಸಲಿದೆ ಎಂದು ತಿಳಿಸಿದರು.
ಸಿಎಂ ಜನತೆಗೆ ಯಾವ ಸಂದೇಶ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಕೋಲಿ ಸಮಾಜದ ಯುವಕ ಆತ್ಮಹತ್ಯೆ ಮಾಡಿಕೊಂಡಾಗ ಎಫ್ಐಆರ್ ಮಾಡಲು ಮೀನಮೇಷ ಎಣಿಸುತ್ತಾರೆ. ಎಫ್ಐಆರ್ನಲ್ಲಿ ಬೇನಾಮಿ ಹೆಸರುಗಳನ್ನು ಸೇರಿಸಿದ್ದಾರೆ ಎಂದು ಆಕ್ಷೇಪಿಸಿದರು.
ಒಟ್ಟಾರೆಯಾಗಿ ರೈತರ ವಿಚಾರದಲ್ಲಿ ರಾಜ್ಯ ಸರಕಾರದ ನಡವಳಿಕೆ, ದಲಿತ ವಿರೋಧಿ ಕಾರ್ಯವೈಖರಿ ಖಂಡನೀಯ ಎಂದು ತಿಳಿಸಿದರು.
ಸರಕಾರ ಮತ್ತು ಸಚಿವರು ಅಧಿಕಾರ ದರ್ಪದಿಂದ ಆಡಳಿತ ಮತ್ತು ಅಭಿವೃದ್ಧಿಯನ್ನು ಮರೆತಿದ್ದಾರೆ. ಇಂಥ ಸರಕಾರವನ್ನು ಅಧಿಕಾರಕ್ಕೆ ತಂದ ಜನರು ತಮ್ಮನ್ನು ತಾವು ಪ್ರಶ್ನೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ರಾಜ್ಯ ಸರಕಾರ ಇವೆಲ್ಲ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಅಭಿವೃದ್ಧಿಯತ್ತ ಗಮನ ಕೊಡಬೇಕೆಂದು ಆಗ್ರಹಿಸಿದರು.
136 ಶಾಸಕರೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಆದರೆ, ಅವರು ಜನರ ಆಸೆಯನ್ನು ನಿರಾಸೆಗೊಳಿಸಿದ್ದಾರೆ. ರಾಜ್ಯದಲ್ಲಿ ಜನಾಕ್ರೋಶ ಹೆಚ್ಚಾಗಿದೆ. ಚುನಾವಣೆಗೆ ಮೊದಲು ಜೋಡೆತ್ತುಗಳಂತಿದ್ದ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ಅವರ ವಿಚಾರ ಜನರ ನಡುವೆ ಚರ್ಚೆಗೆ ಗ್ರಾಸವಾಗಿದೆ. ಸಿಎಂ ಕುರ್ಚಿ ಸಂಬಂಧ ಡಿ.ಕೆ.ಶಿವಕುಮಾರ್ ಕಾತರದಿಂದ ಕಾಯುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಅಧಿಕಾರ ಕಡಿಮೆ ಮಾಡಲು ಎಷ್ಟು ಡಿಸಿಎಂ ಹುದ್ದೆ ಸೃಷ್ಟಿಸಬಹುದೆಂದು ರಾಜಕೀಯ ಹುನ್ನಾರ ನಡೆದಿದೆ ಎಂದು ವಿಶ್ಲೇಷಿಸಿದರು.
ಬರಗಾಲ ಸಂಬಂಧ ಒಬ್ಬರೇ ಒಬ್ಬ ಸಚಿವರು ಪ್ರವಾಸ, ಸಭೆ ಮಾಡಿಲ್ಲ. ರೈತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ಮಧ್ಯಂತರ ಪರಿಹಾರ, ಬೆಳೆವಿಮೆಯ ಕುರಿತು ಚರ್ಚಿಸಿಲ್ಲ. ಮೇವು ಸ್ಟಾಕ್ ಮಾಡಿಲ್ಲ. ವಿದ್ಯುತ್ ಕೊರತೆ ಮಿತಿಮೀರಿದೆ ಎಂದರು. ಹಿಂದೆ ಗರಿಷ್ಠ ಸಂಕಷ್ಟಗಳಿದ್ದರೂ ಯಡಿಯೂರಪ್ಪನವರ ಸರಕಾರವು 7 ಗಂಟೆ ವಿದ್ಯುತ್ ಅನ್ನು ರೈತರಿಗೆ ಕೊಟ್ಟಿತ್ತು ಎಂದು ನೆನಪಿಸಿದರು.
ಕಾಂಗ್ರೆಸ್ ಸರಕಾರ ರೈತವಿರೋಧಿ, ಬಡವರ ವಿರೋಧಿ. ಕಿಸಾನ್ ಸಮ್ಮಾನ್ ಯೋಜನೆಯಡಿ ಯಡಿಯೂರಪ್ಪನವರು ನೀಡುತ್ತಿದ್ದ ಹೆಚ್ಚುವರಿ 4 ಸಾವಿರವನ್ನು ರದ್ದು ಮಾಡಿದ ಸರಕಾರವಿದು ಎಂದು ಆಕ್ಷೇಪಿಸಿದರು.
ಅಧಿಕಾರದ ಅಮಲಿನಲ್ಲಿ ಸರಕಾರ, ಸಚಿವರು ತೇಲುತ್ತಿದ್ದಾರೆ ಎಂದು ಟೀಕಿಸಿದರು.ಕಬ್ಬು ಬೆಳೆಗಾರರ ಭೇಟಿಗೆ ಸಿಎಂ ಸಿದ್ದರಾಮಯ್ಯನವರು ಅವಕಾಶ ಕೊಟ್ಟಿಲ್ಲ. ಬದಲಾಗಿ ಅವರನ್ನು ಬಂಧಿಸಲಾಗಿದೆ. ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ಈ ಸರಕಾರ ದಲಿತ ವಿರೋಧಿ ಎಂದು ಆಕ್ಷೇಪಿಸಿದ ಅವರು, ಸಂವಿಧಾನವಿರೋಧಿ ಹೇಳಿಕೆ ನೀಡಿದ ಜಮೀರ್ ಅಹ್ಮದ್ ಅವರ ರಾಜೀನಾಮೆ ಪಡೆಯಲು ಸಿಎಂ ಅವರನ್ನು ಆಗ್ರಹಿಸಿದರು.