ಹಾಸನ ,ನ 20 (DaijiworldNews/RA): ಪತಿಯೊಬ್ಬ ತನ್ನ ವಿರುದ್ಧ ದೂರು ಕೊಟ್ಟ ಪತ್ನಿಗೆ ಠಾಣೆಯಲ್ಲೇ ಇರಿದ ಘಟನೆ ಹಾಸನದಲ್ಲಿ ನಡೆದಿದೆ. ಪತಿ ಹರೀಶ್ ಎಂಬಾತ ಕೊಲೆಗೆ ಯತ್ನಿಸಿದ ಆರೋಪಿಯಾಗಿದ್ದು, ಪತ್ನಿ ಶಿಲ್ಪಾ ಹಲ್ಲೆಗೆ ಒಳಗಾದವರಾಗಿದ್ದಾರೆ.
ಇವರಿಬ್ಬರು ಕಳೆದ ಆರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆ ಬಳಿಕ ಇವರಿಬ್ಬರ ನಡುವೆ ಮೂಡಿದ ಅನುಮಾನ ಸಂಸಾರದಲ್ಲಿ ಬಿರುಕಿಗೆ ಕಾರಣವಾಗಿತ್ತು. ಹೀಗಾಗಿ ಪತಿ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.
ಈ ನಿಟ್ಟಿನಲ್ಲಿ ಪೊಲೀಸರು ಪತಿ ಹರೀಶ್ ನನ್ನು ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸುತ್ತಿದ್ದರು. ಇದೇ ವೇಳೆ ತನ್ನ ವಿರುದ್ಧ ದೂರು ನೀಡಿದ್ದ ಪತ್ನಿಯ ಶಿಲ್ಪಾಳ ವಿರುದ್ಧ ಸಿಟ್ಟಿಗೆದ್ದ ಪತಿ ಹರೀಶ್ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಚಾಕು ಕಿತ್ತುಕೊಂಡು ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಪೊಲೀಸರ ಸಮಯ ಪ್ರಜ್ಞೆಯಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ. ಇತ್ತ ಗಾಯಾಳು ಶಿಲ್ಪಾಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.