ನವದೆಹಲಿ ನ.19 (DaijiworldNews/SK): ಸುರಂಗ ನಿರ್ಮಾಣ ಕಾರ್ಯದ ವೇಳೆ ಭೂಕುಸಿತ ಉಂಟಾಗಿ ಕಾರ್ಮಿಕರು ಸುರಂಗದ ಒಳಗೆ ಸಿಲುಕಿಕೊಂಡಿರುವ ಘಟನೆ ಉತ್ತರಾಖಂಡದ ಉತ್ತರಕಾಶಿಯಲ್ಲಿ ನಡೆದಿದೆ. ಕಳೆದ ಏಳು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಸುರಂಗದ ಒಳಗೆ ಸಿಲುಕಿರುವ 41 ಮಂದಿ ಕಾರ್ಮಿಕರನ್ನು ರಕ್ಷಿಸಲು ನಾಲ್ಕೈದು ದಿನಗಳಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ರಹ್ಮಖಾಲ್-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲ್ಕ್ಯಾರಾದಿಂದ ದಾಂಡಲ್ಗಾಂವ್ಗೆ ಸಂಪರ್ಕಿಸುವ ಸುರಂಗದ ಮೂಲಕ ಸಿಲುಕಿದ್ದವರನ್ನು ಸುರಕ್ಷಿತವಾಗಿ ರಕ್ಷಿಸಲು ರಕ್ಷಣಾ ತಂಡಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ದೀರ್ಘಾವಧಿಯಿಂದ ಸಿಲುಕಿರುವ ಕಾರ್ಮಿಕರ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ವಿಟಮಿನ್ ಮಾತ್ರೆಗಳು, ಖಿನ್ನತೆ ನಿವಾರಕ ಔಷಧಗಳು ಹಾಗೂ ಡ್ರೈ ಫ್ರೂಟ್ನ್ನು ಪೈಪ್ಗಳ ಮೂಲಕ ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಅದೃಷ್ಟವಶಾತ್ ಸುರಂಗದ ಒಳಗಡೆ ವಿದ್ಯುತ್ ಆನ್ ಇದ್ದು, ಕುಡಿಯಲು ನೀರಿನ ವ್ಯವಸ್ಥೆ ಇದೆ. ಇಂದಿನಿಂದ ಬೆಟ್ಟದ ತುದಿಯಿಂದ ಲಂಬವಾಗಿ ರಂದ್ರ ಕೊರೆಯಲಾಗುತ್ತಿದೆ. ಇದಕ್ಕಾಗಿ ಮಧ್ಯಪ್ರದೇಶದ ಇಂದೋರ್ ನಿಂದ ಹೆಚ್ಚಿನ ಕಾರ್ಯಕ್ಷಮತೆಯ ಡ್ರಿಲ್ಲಿಂಗ್ ಯಂತ್ರವನ್ನು ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಘಟನಾ ಸ್ಥಳದಲ್ಲಿ ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿಗಳ ತಂಡ ಮತ್ತು ತಜ್ಞರ ತಂಡ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಸಿಲುಕಿರುವ ಕಾರ್ಮಿಕರನ್ನು ಸಾಧ್ಯವಾದಷ್ಟು ಬೇಗ ತಲುಪಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರಧಾನಿಯ ಮಾಜಿ ಸಲಹೆಗಾರ ಭಾಸ್ಕರ್ ಖುಲ್ಬೆ ತಿಳಿಸಿದ್ದಾರೆ. ಇದರ ಜೊತೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸ್ಥಳಕ್ಕೆ ಭೇಟಿ ನೀಡಿ, ಅವಶೇಷಗಳ ಅಡಿ ಸಿಲುಕಿರುವ ಕಾರ್ಮಿಕರನ್ನು ಜೀವಂತವಾಗಿ ರಕ್ಷಿಸುವುದು ನಮ್ಮ ಗುರಿಯಾಗಿದೆ ಎಂದರು.