ಬೆಂಗಳೂರು, ನ.19 (DaijiworldNews/SK): ಬಾಲಕಿಯೊಬ್ಬಳು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗಂಗೊಂಡಹಳ್ಳಿ ಎಂಬಲ್ಲಿ ನಡೆದಿದೆ.
ಇಲ್ಲಿನ ಗಂಗೊಂಡಹಳ್ಳಿ ನಿವಾಸಿಗಳಾದ ವಿನೋದ್ ಮತ್ತು ನಳಿನ ದಂಪತಿ ಪುತ್ರಿ ಆಕೃತಿ (07) ಮೃತಪಟ್ಟ ಬಾಲಕಿಯಾಗಿದ್ದಾಳೆ.
ಪೋಷಕರು ಮಗಳು ಹಠ ಮಾಡುತ್ತಿರುವುದನ್ನು ಕಂಡು ಬುದ್ದಿ ಹೇಳಿ ಎಂದು ಪಕ್ಕದ ಮನೆಯ ನಿವಾಸಿ ನಂಜುಂಡಪ್ಪರ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ. ಇವರ ಮನೆ ಬಂದ ಬಾಲಕಿ ಆಕೃತಿಗೆ ಸುಮಾರು 2:10 ರ ವೇಳೆಗೆ ವಾಂತಿ ಸುರುವಾಗಿದೆ. ಈ ವೇಳೆ ಮಗುವಿನ ಪೋಷಕರಿಗೆ ತಿಳಿಸದೆ ನಂಜುಂಡಪ್ಪ ಚಿಕಿತ್ಸೆಗಾಗಿ ಬಾಲಕಿಯನ್ನು ಆಸ್ಪತ್ರೆಗೆ ದಾಖಸಿದ್ದಾರೆ. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಇನ್ನು ಮಗುವನ್ನು ಆಸ್ಪತ್ರಗೆ ದಾಖಲಿಸುವುದಕ್ಕೂ ಮುನ್ನ ಬಾಲಕಿಯ ಪೋಷಕರಿಗೆ ಎರಡು ಬಾರಿ ಫೋನ್ ಕರೆ ಮಾಡಲಾಗಿತ್ತು. ಆದರೆ ಗಾಢ ನಿದ್ರೆಯಲ್ಲಿದ್ದ ಪೋಷಕರು ಫೋನ್ ಕರೆ ಕೂಡ ಸ್ವೀಕರಿಸಿಲ್ಲ ಜೊತೆಗೆ ಮನೆ ಬಾಗಿಲು ತೆರೆದಿಲ್ಲ ಎನ್ನಲಾಗಿದೆ.
ಘಟನೆಯ ಬಳಿಕ FSL ತಂಡ ಪರಿಶೀಲನೆ ನಡೆಸಿದ್ದು, ಬಾಲಕಿಯ ಮೈಕೈ ಬಳಿ ರಕ್ತ ಹೆಪ್ಪುಗಟ್ಟಿದ ಗಾಯಗಳು ಕಂಡುಬಂದಿವೆ. ಮಗುವಿಗೆ ಭಯ ಹುಟ್ಟಿಸಲು ಯಾವುದೋ ವಸ್ತುವಿನಿಂದ ಹೊಡೆದಿದ್ದು, ಈ ವೇಳೆ ಉಸಿರುಗಟ್ಟಿ ಸತ್ತಿರಬಹುದೆಂದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮೃತ ಬಾಲಕಿಯ ಪೋಷಕರು ಪಕ್ಕದ ಮನೆಯ ನಂಜುಂಡಪ್ಪ ವಿರುದ್ಧ ದೂರು ನೀಡಿದ್ದು, ಈ ದೂರಿನ ಮೇರೆಗೆ ನಂಜುಂಡಪ್ಪ ಹಾಗೂ ಆತನ ಪತ್ನಿಯನ್ನು ಪೊಲೀಸರು ವಶಕ್ಕೆ ಪಡದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದೆ.