ಬೆಂಗಳೂರು, ನ 19 (DaijiworldNews/PC): ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು ಮನೆಯ ದೀಪಾಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ 68 ಸಾವಿರ ರೂ ದಂಡ ವಿಧಿಸಲಾಗಿತ್ತು.
ಈ ಘಟನೆ ಬಳಿಕ ಇದೀಗ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ 2021-22 ಮತ್ತು 2023-24 ರ ನಡುವೆ 8,000 ಕ್ಕೂ ಹೆಚ್ಚು ವಿದ್ಯುತ್ ಕಳ್ಳತನ ಪ್ರಕರಣಗಳನ್ನು ದಾಖಲಿಸಿರುವುದು ತಿಳಿದುಬಂದಿದೆ.
ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಬೆಸ್ಕಾಂ 8,000 ಕ್ಕೂ ಹೆಚ್ಚು ವಿದ್ಯುತ್ ಕಳ್ಳತನ ಪ್ರಕರಣಗಳನ್ನು ದಾಖಲಿಸಿ 33 ಕೋಟಿ ರೂ.ಗೂ ಹೆಚ್ಚು ದಂಡವನ್ನು ವಸೂಲಿ ಮಾಡಿದೆ.
2021-22 ಸಾಲಿನಲ್ಲಿ, ಬೆಸ್ಕಾಂ 3,369ಬಿಬಿಸಿ ಮತ್ತು 797 ಸಿಸಿ ಪ್ರಕರಣಗಳನ್ನು ದಾಖಲಿಸಿ 13.92 ಕೋಟಿ ರೂ. ದಂಡವನ್ನು ಸಂಗ್ರಹಿಸಿದೆ. 2022-23 ವರ್ಷದಲ್ಲಿ 2,268 ಬಿಬಿಸಿ ಮತ್ತು 560 ಸಿಸಿ ಪ್ರಕರಣಗಳನ್ನು ದಾಖಲಿಸಿ 12 ಕೋಟಿ ರೂ. ದಂಡವನ್ನು ಸಂಗ್ರಹಿಸಲಾಗಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಅಕ್ಟೋಬರ್ 31 ರ ವರೆಗೆ, 955 ಬಿಬಿಸಿ ಪ್ರಕರಣಗಳು ಮತ್ತು 235 ಸಿಸಿ ಅಡಿ ಪ್ರಕರಣಗಳನ್ನು ದಾಖಲಿಸಿ 6.55 ಕೋಟಿ ರೂ. ದಂಡವನ್ನು ಸಂಗ್ರಹಿಸಲಾಗಿದೆ ಎಂದು ಬೆಸ್ಕಾಂ ಅಂಕಿಅಂಶಗಳು ತಿಳಿಸಿವೆ.
ಬೆಸ್ಕಾಂ ನ ಹಿರಿಯ ಅಧಿಕಾರಿಯ ಪ್ರಕಾರ, ವಿದ್ಯುತ್ ಕಳ್ಳತನದ ಅಡಿಯಲ್ಲಿ ಬಿಲ್ ಬಾಕಿ ಪ್ರಕರಣಗಳು (ಬಿಬಿಸಿ) ಮತ್ತು ಕಾಂಪೌಂಡಿಂಗ್ (ಕೋರ್ಟ್ನಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳು) ಪ್ರಕರಣಗಳು (ಸಿಸಿ) ಎಂಬ ಎರಡು ರೀತಿಯ ಪ್ರಕರಣಗಳನ್ನು ದಾಖಲಿಸಲಾಗಿದೆ.
ಬಿಬಿಸಿಗಳ ಮೂಲಕ ಸಂಗ್ರಹಿಸಲಾದ ದಂಡವು ಬೆಸ್ಕಾಂಗೆ ಹೋದರೆ, ಉಳಿದ ಪಕ್ರರಣಗಳ ದಂಡದ ಮೊತ್ತ ಸರ್ಕಾರಕ್ಕೆ ಹೋಗುತ್ತದೆ ಎಂದು ತಿಳಿದು ಬಂದಿದೆ.