ಬೆಂಗಳೂರು, ನ 18 ( DaijiworldNews/AA): ಕುಮಾರಣ್ಣ ಹಾಗೂ ವಿಜಯೇಂದ್ರ ಅವರು ಈಗ ಪಾರ್ಟನರ್ಗಳು. ಅವರ ಮಧ್ಯೆಯೇ ಗೊಂದಲ ಇರುವಾಗ ನಾನು ಹೇಗೆ ಪ್ರತಿಕ್ರಿಯಿಸಲಿ. ಕುಮಾರಣ್ಣ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ಪಕ್ಷದ ಅಧ್ಯಕ್ಷರಾಗಿದ್ದವರು. ಅವರು ಆ ಸ್ಥಾನಗಳಿಗೆ ತಕ್ಕಂತೆ ಗೌರವ ಉಳಿಸಿಕೊಳ್ಳಬೇಕು ಎಂದು ನಾನು ನಿರೀಕ್ಷಿಸುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಯತೀಂದ್ರ ಅವರ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು. ಈ ಕುರಿತು ಬೆಂಗಳೂರಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ ಡಿ ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿಗಳು. ಅವರಿಗೊಂದು ಘನತೆ ಇದ್ದು, ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ನೀರೀಕ್ಷೆ ಮಾಡುತ್ತೇನೆ ಎಂದರು.
ದಿನ ಬೆಳಗಾದರೆ ಸುಳ್ಳು ಆರೋಪ ಮಾಡುವುದು ಅವರ ಘನತೆಗೆ ಸರಿಯಲ್ಲ. ಅವರ ತಂದೆಯೂ ಹಲವು ಬಾರಿ ಈ ಬಗ್ಗೆ ಸಲಹೆ ನೀಡಿದ್ದಾರೆಂಬ ವಿಚಾರ ಕೇಳಿದ್ದೇನೆ. ಮಾಜಿ ಮುಖ್ಯಮಂತ್ರಿಗಳಾದ ದೇವೇಗೌಡರು, ಯಡಿಯೂರಪ್ಪ, ಎಸ್.ಎಂ ಕೃಷ್ಣ, ವೀರಪ್ಪ ಮೊಯ್ಲಿ, ಸದಾನಂದ ಗೌಡರು, ಬಸವರಾಜ ಬೊಮ್ಮಾಯಿ ಅವರು ಕೂಡ ಇವರಂತೆ ಸುಮ್ಮನೆ ಮಾತನಾಡುತ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ.
ಕುಮಾರಸ್ವಾಮಿ ಅವರು ಜನ ಕೊಟ್ಟ ಅವಕಾಶ, ಬೆಂಬಲಿಗರ ಸಹಾಯ, ತಂದೆ-ತಾಯಿ ಆಶೀರ್ವಾದ, ತಮ್ಮದೇ ಆದ ಹೋರಾಟದಿಂದ ಮುಖ್ಯಮಂತ್ರಿ ಆಗಿದ್ದವರು. ಆ ಸ್ಥಾನಕ್ಕೆ ಧಕ್ಕೆ ಉಂಟಾಗದಂತೆ ವರ್ತಿಸಬೇಕು. ಅದು ಬಿಟ್ಟು ಬೆಳಗ್ಗೆಯಿಂದ ಸಂಜೆವರೆಗೂ ಮನಸ್ಸಿಗೆ ಬಂದಂತೆ ಮಾತನಾಡಿದರೆ ಉಪಯೋಗವಿಲ್ಲ. ಮಾಜಿ ಮುಖ್ಯಮಂತ್ರಿಗಳ ಮಾತು, ವರ್ತನೆ ಎಂದರೆ ನಾವು ಹೆದರಿ ನಡುಗುವಂತೆ ಇರಬೇಕು ಎಂದು ಡಿಕೆಶಿ ತಿಳಿಸಿದ್ದಾರೆ.
ಯತೀಂದ್ರ ಅವರು ತಮ್ಮ ತಂದೆಗಾಗಿ ಸ್ಥಾನ ತ್ಯಾಗ ಮಾಡಿದ್ದು, ನಾವು ಅವರನ್ನು ಎಂಎಲ್ಸಿ ಮಾಡುತ್ತೇವೆ ಎಂದರೂ ಅದನ್ನು ಬೇಡ ಎಂದು ಹೇಳಿದ್ದರು. ಅವರು ತನ್ನ ತಂದೆಯ ಕ್ಷೇತ್ರದಲ್ಲಿ ಕೆಡಿಪಿ ಸದಸ್ಯನಾಗಿ ಕೆಲಸದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ನಮ್ಮ ಕ್ಷೇತ್ರದಲ್ಲೂ ಅಧಿಕಾರಿಗಳ ವರ್ಗಾವಣೆ ಅರ್ಜಿ ಇಟ್ಟುಕೊಂಡು ಹಲವು ಮಂದಿ ಬರುತ್ತಾರೆ. ಹೀಗೆಂದು ಯತೀಂದ್ರ ಅವರು ವರ್ಗಾವಣೆ ಮಾಡಿದ್ದಾರೆ ಎಂದು ಅರ್ಥವಲ್ಲ. ಅವರು ಶಾಸಕರು ಅಲ್ಲದೇ ಹೋದರೂ ಕ್ಷೇತ್ರದ ಜನರ ಕೆಲಸ ಮಾಡುತ್ತಿದ್ದಾರೆ. ಅದನ್ನು ನೋಡಿ ಸಂತೋಷಪಡಬೇಕು. ಈ ರೀತಿ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದರು.