ಬೆಂಗಳೂರು: ನ 18 (DaijiworldNews/MR): ರಾಜ್ಯ ಸರ್ಕಾರವು ಮಹಿಳಾ ಉದ್ಯಮಿಗಳಿಗೆ ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಮಂಡಳಿ ಸೇರಿ ಹಲವು ವ್ಯವಸ್ಥೆಗಳ ಮೂಲಕ ಉತ್ತೇಜನ ನೀಡುತ್ತಿದೆ. ಉದ್ಯಮಶೀಲ ಮಹಿಳೆಯರು ಬೆಂಗಳೂರು ಅಷ್ಟೇ ಅಲ್ಲದೇ ಬೇರೆ ಕಡೆಗಳಲ್ಲಿಯು ಉದ್ಯಮಗಳನ್ನು ಸ್ಥಾಪಿಸಲು ಮುಂದಾಗಬೇಕು ಎಂದು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ರಾಷ್ಟ್ರೀಯ ಮಟ್ಟದ ಮಹಿಳಾ ಉದ್ಯಮಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಉದ್ಯಮಿಗಳಿಗೆ ಹಂಚುತ್ತಿರುವ ನಿವೇಶನದಲ್ಲಿ ಮಹಿಳಾ ಉದ್ಯಮಿಗಳಿಗೆ ಕೈಗಾರಿಕಾ ನೀತಿಯಲ್ಲಿ ಕೆಐಎಡಿಬಿ ಮೂಲಕ ಶೇ.5ರಷ್ಟು ಮೀಸಲಾತಿ ಇದೆ. ಜೊತೆಗೆ ಜಮೀನು ಹಂಚಿಕೆಯಲ್ಲಿ ಕೆಎಸ್ ಐ ಐಡಿಸಿ ಸೂತ್ರವನ್ನು ಅಳವಡಿಸಿಕೊಳ್ಳಲಾಗಿದೆ. ಹೆಚ್ಚುವರಿ ಪ್ರೋತ್ಸಾಹ ಮತ್ತು ವಿದ್ಯುತ್ ಬಿಲ್ ಮೇಲೆ ನಾಲ್ಕು ವರ್ಷಗಳ ವಿನಾಯಿತಿ ನೀಡಲಾಗುತ್ತಿದೆ ಎಂದು ಹೇಳಿದರು.
ಮಹಿಳೆಯರನ್ನು ಕೈಗಾರಿಕಾ ರಂಗದಲ್ಲಿ ಮೊದಲಿನಿಂದಲೂ ಪ್ರೋತ್ಸಾಹಿಸುತ್ತಿದೆ. ತಂತ್ರಜ್ಞಾನ ಪರಿಪೋಷಣಾ ಕೇಂದ್ರ, ತಂತ್ರಜ್ಞಾನ ಅಳವಡಿಕೆಗಳಲ್ಲಿ ಅರ್ಧದಷ್ಟು ಮೊತ್ತವನ್ನು ಸಬ್ಸಿಡಿಯಾಗಿ ನೀಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಮಳೆನೀರು ಸಂಗ್ರಹಣೆ, ತ್ಯಾಜ್ಯ ನೀರು ಮರುಬಳಕೆ, ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗಳಿಗೂ ಪ್ರೋತ್ಸಾಹ ಕೊಡಲಾಗುತ್ತಿದೆ.
ಮಹಿಳೆಯರು ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದೆ ಬಂದರೆ, ಕೆಎಸ್ ಎಫ್ ಸಿ ಮೂಲಕ 2 ಕೋಟಿ ರೂ.ವರೆಗೂ ಶೇ. 14ರಷ್ಟು ಬಡ್ಡಿ ದರದಲ್ಲಿ ಸುಲಭವಾಗಿ ಸಾಲ ಕೊಡಲಾಗುತ್ತಿದೆ.
ಮಹಿಳೆಯರು ಸಣ್ಣ ಮತ್ತು ಮಧ್ಯಮ ಸ್ವರೂಪದ ಕೈಗಾರಿಕೆಗಳನ್ನು ಸ್ಥಾಪಿಸುವ ಆಸಕ್ತಿ ಪಡೆದುಕೊಳ್ಳಬೇಕು ಎಂದು ಹೇಳಿದರು.