ಬೆಂಗಳೂರು, ನ 18 ( DaijiworldNews/AA): ‘ಹೇ ಪ್ರಭು! ಚಹಾ ಮಾರಿಕೊಂಡು ಆದರೂ ಬದುಕಬಹುದು, ನಿಮ್ಮಂತೆ ಬದುಕು ಮಾರಿಕೊಂಡು ಅಲ್ಲ!’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿ ಕಚೇರಿ ಶ್ರೀಮಂತರ ಚಹಾ ಹೋಟೆಲ್, ಇಲ್ಲಿ ಬಡವರ ಚಹಾ ಸಿಗಲ್ಲ ಅಂತ ಹೊರಗೆ ಟೀ ಕುಡಿಯಲು ಹೋದವರು ಜಗನ್ನಾಥ ಭವನದ ಎದುರು ಟೀ ಮಾರಿಕೊಂಡು ಕೂತಿದ್ದಾರಂತೆ, ಮೋದಿ ಮಾದರಿ!! ಹೇ ಜಗನ್ನಾಥ ಪ್ರಭು, ನೀನೆಷ್ಟು ಕ್ರೂರಿ..?! "ಜಾರಿದವರ ಯತ್ನ ಬೆಲ್ಲ" ಆಗ್ಲಿಲ್ಲವಲ್ಲಪ್ಪ..! ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಕಾಂಗ್ರೆಸ್ ವ್ಯಂಗ್ಯವಾಡಿತ್ತು.ಇದೀಗ ಕಾಂಗ್ರೆಸ್ ಪೋಸ್ಟ್ ಗೆ ಯತ್ನಾಳ್ ಟಾಂಗ್ ನೀಡಿದ್ದಾರೆ.
ಶುಕ್ರವಾರ ನಡೆದ ಬಿಜೆಪಿ ಶಾಸಕಾಂಗ ಸಭೆಗೂ ಮುನ್ನವೇ ''ಇದು ಬಡವರು ಚಹಾ ಕುಡಿಯುವ ಜಾಗವಲ್ಲ. ಇಲ್ಲಿ ಚಹಾ ಬಹಳ ತುಟ್ಟಿ. ಚಹಾ ಕುಡಿಯಲು ಹೊರಗಡೆ ಹೋಗುತ್ತಿದ್ದೇನೆ'' ಎಂದು ಶಾಸಕ ಯತ್ನಾಳ್ ಹೊರ ನಡೆದಿದ್ದರು. ಈ ಹಿನ್ನೆಲೆ ಇಂದು ಎಕ್ಸ್ ನಲ್ಲಿ ಕಾಂಗ್ರೆಸ್ ಪೋಸ್ಟ್ ವ್ಯಂಗ್ಯ ಮಾಡಿತ್ತು.