ಬೆಂಗಳೂರು, ನ 17 (DaijiworldNews/AA) : ಬಿಜೆಪಿ ಶಾಸಕಾಂಗ ಸಭೆಗೂ ಮುನ್ನ ಪಕ್ಷದಲ್ಲಿ ಅಸಮಧಾನ ಸ್ಫೋಟಗೊಂಡಂತೆ ಕಾಣುತ್ತಿದೆ. ಸಭೆಗೂ ಮುನ್ನವೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಹೊರ ನಡೆದಿದ್ದಾರೆ.
ಶಾಸಕಾಂಗ ಸಭೆಗೆ ಬಂದ ಯತ್ನಾಳ್, ಕೆಲವೇ ಕ್ಷಣಗಳಲ್ಲಿ ''ಇದು ಬಡವರು ಚಹಾ ಕುಡಿಯುವ ಜಾಗವಲ್ಲ. ಚಹಾ ಕುಡಿಯಲು ಹೊರಗಡೆ ಹೋಗುತ್ತಿದ್ದೇನೆ'' ಎಂದು ಸಭೆಯಿಂದ ಹೊರ ನಡೆದಿದ್ದು, ಅವರೊಂದಿಗೆ ರಮೇಶ್ ಜಾರಕಿಹೊಳಿ ಸಹ ಹೊರ ನಡೆದಿದ್ದಾರೆ.
ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಯತ್ನಾಳ್ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು.ಬಿಜೆಪಿ ಒಂದೇ ಕುಟುಂಬಕ್ಕೆ ಸೀಮಿತವಾಗಬಾರದು. ಬ್ಲಾಕ್ಮೇಲ್ ತಂತ್ರಕ್ಕೆ ಕೇಂದ್ರ ಮಣಿಯಬಾರದು.
ಕೆಲವೇ ಚೇಲಗಳ ಮಾತು ಕೇಳಿ ಕೇಂದ್ರ ನಾಯಕರು ತೀರ್ಮಾನಿಸಬಾರದು. ನಾನು ಯಾವುದೇ ಕಾರಣಕ್ಕೂ ಕಾಂಪ್ರಮೈಸ್ ಆಗುವುದಿಲ್ಲ. ನನ್ನ ಖರೀದಿಸಲು ಸಾಧ್ಯವಿಲ್ಲ. ವಿಪಕ್ಷ ನಾಯಕ ಸ್ಥಾನ ಉತ್ತರ ಕರ್ನಾಟಕದವರಿಗೆ ಕೊಡಬೇಕು. ವಿಪಕ್ಷ ಸ್ಥಾನ ನೀಡದಿದ್ದರೆ ಜನ ತೀರ್ಮಾನಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.