ಕಾರವಾರ,ಏ 16(Daijiworld News/MSP): ಸಚಿವ ರೇವಣ್ಣ ಅವರ ಸೋದರ ಸಂಬಂಧಿ ಮನೆ ಹಾಗೂ ದೇವೇಗೌಡರ ಹುಟ್ಟೂರು ಹರದನಹಳ್ಳಿಯಲ್ಲಿ ಅವರ ತಮ್ಮನ ಮಗ ಪಾಪಣ್ಣಿ ಮನೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಉತ್ತರ ಕನ್ನಡ ಲೋಕಾಸಭಾ ಕ್ಷೇತ್ರದ ಅಭ್ಯರ್ಥಿ ಅನಂತ್ಕುಮಾರ್ ಹೆಗ್ಡೆ ಅವರ ಆಪ್ತರ ಮನೆಯ ಮೇಲೆ ದಾಳಿ ನಡೆಸಿ ಅಪಾರ ನಗದು ವಶಪಡಿಸಿಕೊಂಡಿದ್ದಾರೆ.
ಹೆಗ್ಡೆ ಆಪ್ತರಾಗಿರುವ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಆರ್.ವಿ ಹೆಗಡೆ, ಹಾಗೂ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಎಸಳೆ ಮನೆಯ ಮೇಲೆ ಐಟಿ ಅಧಿಕಾರಿಗಳು ಹಾಗೂ ಚುನಾವಣಾ ವೀಕ್ಷಣಾ ದಳ ದಾಳಿ ನಡೆಸಿದ್ದು ಈ ಸಂದರ್ಭ ಆರ್.ವಿ ಹೆಗಡೆ ನಿವಾಸದಿಂದ ನಾಲ್ಕು ಕಾರು ಮತ್ತು ದೊಡ್ಡ ಮೊತ್ತದ ನಗದನ್ನು ವಶಕ್ಕೆ ಪಡೆಯಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಶಿರಸಿ ನಗರದ ಚಿಪಗಿ ಬಡಾವಣೆಯಲ್ಲಿ ಆರ್.ವಿ ಹೆಗಡೆ ಮನೆ ಹೊಂದಿದ್ದು, ಕೃಷ್ಣಾ ಎಸಳೆ ವಿವೇಕಾನಂದ ನಗರದ ಕೆಎಚ್ಬಿ ಕಾಲೋನಿಯಲ್ಲಿ ನೆಲೆಸಿದ್ದಾರೆ. ಇವರ ಮನೆಯಿಂದಲೂ ಅಪಾರ ಪ್ರಮಾನದ ನಗದು ವಶಪಡಿಸಲಾಗಿದೆ. ಗೋವಾ ಹಾಗೂ ಹುಬ್ಬಳ್ಳಿಯಿಂದ ಬಂದ ಐದು ಮಂದಿ ಐಟಿ ಅಧಿಕಾರಿಗಳ ತಂಡ ಈ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.