ಬೆಂಗಳೂರು, ನ 17(DaijiworldNews/SK): ನಾನು ಕಾಂಗ್ರೆಸ್ ಪರ ಮಾತನಾಡಿಲ್ಲ. ನಾನು ಬಿಜೆಪಿ ನಾಯಕರ ಜತೆಯಲ್ಲಿದ್ದೇನೆ. ಆದರೆ, ರಾಷ್ಟ್ರೀಯ ನಾಯಕರು ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ ಬಿಡಿ ಎಂದು ಏಕವಚನದಲ್ಲಿ ಮಾತನಾಡಿದ್ದಾರೆ ಎಂದು ಶಾಸಕ ಎಸ್.ಟಿ. ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗಾಗಿ ಸಿಎಂ, ಡಿಸಿಎಂ ಅವರನ್ನು ಭೇಟಿ ಮಾಡಬಾರದಾ? ಇದೇ ದೊಡ್ಡ ತಪ್ಪಾಯಿತಾ? ಈವರೆಗೆ ಬಿಜೆಪಿ ಸರ್ಕಾರದಲ್ಲಿ ಸಣ್ಣ ತಪ್ಪನ್ನೂ ನಾನು ಮಾಡಿಲ್ಲ. ಯಾರೋ ಲೀಡರ್ ಬಂದು ಏಕವಚನದಲ್ಲಿ ಪಕ್ಷ ತೊರೆದು ಹೋಗಿ ಅಂದ್ರೆ ಆಗಲ್ಲ. ಅವರಪ್ಪನ ರೀತಿ ಮಾತನಾಡುವ ಶಕ್ತಿಯನ್ನು ದೇವರು ನನಗೂ ಕೊಟ್ಟಿದ್ದಾನೆ. ಆ ರಾಷ್ಟ್ರೀಯ ನಾಯಕರು ಯಾರೆಂಬುದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದು ವಾಗ್ದಾಳಿ ನಡೆಸಿದರು.
20 ವರ್ಷ ಕಾಂಗ್ರೆಸ್ನಲ್ಲಿದ್ದು, ಬಿಜೆಪಿಗೆ ಬಂದೆ. ಒಂದು ಸಣ್ಣ ತಪ್ಪನ್ನೂ ಬಿಜೆಪಿ ಸರಕಾರದಲ್ಲಿ ಮಾಡಿಲ್ಲ.ನಾನು ಕಾಂಗ್ರೆಸ್ಗೆ ಹೋಗುತ್ತೇನೆ ಎಂದು ವಿಧಾನಸಭಾ ಚುನಾವಣೆ ಪೂರ್ವದಿಂದಲೂ ಹೇಳುತ್ತಿದ್ದಾರೆ. ಈಗಲೂ ಅದೇ ರಾಗ ಎಳೆಯುತ್ತಿದ್ದಾರೆ. ನಾನು ಕಾಂಗ್ರೆಸ್ಗೆ ಹೋಗುವುದರಿಂದ ಅವರಿಗೆ ಏನು ಲಾಭ ಇದೆ ಎಂದು ನನಗೆ ಗೊತ್ತಿಲ್ಲ. ಅಂದು, ಇಂದು ನಾನು ಬಿಜೆಪಿಯಲ್ಲೇ ಇದ್ದೇನೆ ಎಂದು ಸ್ಪಷ್ಟಪಡಿಸಿದರು.