ಹುಬ್ಬಳ್ಳಿ, ನ 16 (DaijiworldNews/RA): ನನ್ನ ಪಕ್ಷಾಂತರದ ಎಫೆಕ್ಟ್ ಪಂಚ ರಾಜ್ಯಗಳ ಚುನಾವಣೆಯ ಮೇಲೂ ಆಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೀನಾಯ ಸ್ಥಿತಿಗೆ ತಲುಪಿ ರಿಪೇರಿ ಮಾಡಲಾರದಷ್ಟೂ ವ್ಯವಸ್ಥೆ ಹದಗೆಟ್ಟು ಹೋಗಿದೆ. ಬಿಜೆಪಿಯಲ್ಲಿ ಹಿರಿಯರನ್ನು ದೂರವಿಡುವ ಕೆಲಸ ಬಹಳ ಹಿಂದಿನಿಂದಲೂ ನಡೆದಿದೆ.ಪಕ್ಷಕ್ಕಾಗಿ ಸಂಘಟನೆ ಮಾಡಿದವರನ್ನು, ದುಡಿದವರನ್ನು ದೂರವಿಡಲಾಗುತ್ತಿದೆ ಎಂದು ಆರೋಪಿಸಿದರು.
ಆದ್ದರಿಂದಲೇ ಅಲ್ಲಿ 80 ವರ್ಷ ವಯಸ್ಸು ದಾಟಿದವರಿಗೂ ಟಿಕೆಟ್ ಕೊಟ್ಟಿದ್ದಾರೆ. ವಿಜಯೇಂದ್ರ ಪದಗ್ರಹಣಕ್ಕೆ ಯಾವೊಬ್ಬ ಕೇಂದ್ರ ನಾಯಕರು, ವೀಕ್ಷಕರು ಸಹ ಬಂದಿರಲಿಲ್ಲ. ರಾಜ್ಯ ಬಿಜೆಪಿ ಪರಿಸ್ಥಿತಿಗೆ ಇದೇ ಸಾಕ್ಷಿ. ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿರೋದು ಅವರಿಗೆ ಬಿಟ್ಟ ವಿಚಾರ. ಯಾರೋ ಒಬ್ಬರನ್ನ ಅಧ್ಯಕ್ಷರನ್ನಾಗಿ ಮಾಡಬೇಕಿತ್ತು, ವಿಜಯೇಂದ್ರರನ್ನು ಮಾಡಿದ್ದಾರೆ ಎಂದರು.
ಆದ್ರೆ ರಾಜ್ಯಾಧ್ಯಕ್ಷ ಸ್ಥಾನಾಕಾಂಕ್ಷಿಗಳು ಯಾರೂ ಪದಗ್ರಹಣಕ್ಕೆ ಹೋಗಲಿಲ್ಲ. ಒಮ್ಮೆ ನೇಮಕವಾದ ಮೇಲೆ ಎಲ್ಲರೂ ಕೂಡಿ ಕೆಲಸ ಮಾಡಬೇಕೆಂಬ ಮನೋಭಾವ ಬರಬೇಕಿತ್ತು. ಹೀಗಾಗಿ ಬಿಜೆಪಿಯ ಒಳ ಜಗಳ ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ ಎಂದರು.
ಈಗ ಪಂಚ ರಾಜ್ಯಗಳ ಚುನಾವಣೆಯಲ್ಲಿ ಹಿರಿಯರಿಗೆ ಮಣೆ ಹಾಕಲಾಗಿದೆ. 70-75 ವಯಸ್ಸಿನವರಿಗೂ ಟಿಕೆಟ್ ನೀಡಲಾಗಿದೆ. ಅವರಿಗೆ ಯಾಕೆ ಟಿಕೆಟ್ ಕೊಟ್ಟರು? ನಿಯಮ ಎಲ್ಲರಿಗೂ ಒಂದೇ ಅನ್ವಯ ಆಗಬೇಕಲ್ಲವೇ? ಅಧಿಕಾರ ಆಸೆಯಲ್ಲಿ ಎಲ್ಲ ನಿಯಮಗಳನ್ನ ಗಾಳಿಗೆ ತೂರುತ್ತಾರೆ. ವಯಸ್ಸಿನ ನೆಪದಲ್ಲಿ ಅಡ್ವಾಣಿ, ಮುರಳಿ ಮನೋಹರ್ ಜೋಶಿಯವರನ್ನು ಮನೆಗೆ ಕಳಿಸಿದ್ರು. ಈಗ ನೋಡಿದರೆ 80 ವರ್ಷ ಆದವರಿಗೂ ಟಿಕೆಟ್ ಕೊಟ್ಟಿದ್ದಾರೆ ಎಂದು ಕಿಡಿ ಕಾರಿದರು.