ಬೆಂಗಳೂರು,ಏ 16(Daijiworld News/MSP): ಸುಪ್ರೀಂಕೋರ್ಟ್ ಕೋಪಕ್ಕೆ ತುತ್ತಾಗಿ ನ್ಯಾಯಾಲಯದ ಮುಂದೆ ಕಟಕಟೆಯಲ್ಲಿ ನಿಲ್ಲಬೇಕಾಗಿ ಬಂದ ರಾಹುಲ್ ದೇಶವನ್ನು ಮುನ್ನಡೆಸಲು ಅರ್ಹರಲ್ಲ . 125 ವರ್ಷಗಳ ಇತಿಹಾಸವಿರುವ ಪಕ್ಷದ ಅಧ್ಯಕ್ಷ ಈ ರೀತಿ ಅಪ್ರಬುದ್ಧವಾಗಿ ವರ್ತಿಸಿ ನ್ಯಾಯಾಲಯದ ಮುಂದೆ ವಿವರಣೆ ನೀಡಿರುವುದು ಪಕ್ಷದ ದುಸ್ಥಿತಿಯನ್ನು ವಿವರಿಸುತ್ತದೆ. ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಒಬ್ಬ ಅಪ್ರಬುದ್ಧ ನಾಯಕ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಹೇಳಿದ್ದಾರೆ.
ಅವರು ನಗರದ ಖಾಸಗಿ ಹೋಟೇಲ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ರಾಹುಲ್ಗಾಂಧಿ ಅಪ್ರಬುದ್ಧ ನಾಗಿದ್ದರಿಂದಲೇ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆಗೆ ಸಂಬಂಧಿಸಿದಂತೆ ನೋಟಿಸ್ ನೀಡಿದೆ. ಅವರ ದಡ್ಡತನ ಗಮನಿಸಿದರೆ ಕಾಂಗ್ರೆಸ್ ಪಕ್ಷದ ರಾಜಕೀಯ ಪರಿಸ್ಥಿತಿ ಯಾವ ಮಟ್ಟಕ್ಕೆ ಇಳಿದಿದೆ ಎಂದು ಸಾಬೀತಾಗಿದೆ . ಪ್ರಬುದ್ಧ ನಾಯಕತ್ವ ಇದ್ದವರು ಯೋಚಿಸಿ, ಆಲೋಚಿಸಿ ಪ್ರತಿಕ್ರಿಯಿಸುತ್ತಾರೆ ಎಂದವರು ಹೇಳಿದರು
ಶತಮಾನಗಳ ಇತಿಹಾಸವಿರುವ ಕಾಂಗ್ರೆಸ್ಗೆ ರಾಹುಲ್ಗಾಂಧಿ ಅಂತಹ ನಾಯಕತ್ವ ಸಿಕ್ಕಿರುವುದು ಅತ್ಯಂತ ದುರ್ದೈವ .ಇನ್ನು ಬಿಎಸ್ಪಿ ನಾಯಕಿ ಮಾಯಾವತಿ ಹಾಗೂ ಎಸ್ಪಿ ನಾಯಕ ಅಖಿಲೇಶ್ ಯಾದವ್ ಇವರ ಪಾಲಿಗೆ ಕಾಂಗ್ರೆಸ್ ಒಂದು ಅಸ್ಪೃಶ್ಯ ಪಕ್ಷವಾಗಿದೆ ಎಂದು ಆರೋಪಿಸಿದರು.
ದೇಶದಲ್ಲಿ ಈ ಬಾರಿ ಮತ್ತೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಖಂಡಿತಾ. ದೇಶಕ್ಕೆ ಪ್ರಬುದ್ಧ ನಾಯಕತ್ವ ಅಗತ್ಯವಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಹೀಗಾಗಿ ಮೋದಿ ಮತ್ತೆ ಪ್ರಧಾನಿಯಾಗುವುದು ಶತಸಿದ್ದ ಎಂಬ ವಿಶ್ವಾಸ ವ್ಯಕ್ತಪಡಿಸಿದರು.