ಬೆಂಗಳೂರು, ನ.16 (DaijiworldNews/AK): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ನನ್ನ ಆಸ್ತಿಯನ್ನು ತನಿಖೆ ಮಾಡಿಸಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪರೋಕ್ಷವಾಗಿ ಸಚಿವ ಚೆಲುವರಾಯಸ್ವಾಮಿಗೆ ಸವಾಲ್ ಹಾಕಿದ್ದಾರೆ.
ಕುಮಾರಸ್ವಾಮಿ ಆಸ್ತಿ ತನಿಖೆ ಮಾಡಿಸಿ ಎಂಬ ಚೆಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ಕೊಟ್ಟ ಅವರು, ನನ್ನ ಸ್ನೇಹಿತರೊಬ್ಬರು, ನನ್ನ ಆಸ್ತಿ ತನಿಖೆ ಮಾಡುವ ಭಯಕ್ಕೆ ಬಿಜೆಪಿ ಜೊತೆ ಹೋಗಿದ್ದಾರೆ ಎಂದು ಹೇಳಿದ್ದಾರೆ. ಈಗ ತನಿಖೆ ಮಾಡಿ ಎಂದು ಹೇಳುತ್ತಿದ್ದಾರೆ. ನಾನು ಈಗಲೂ ಸಿದ್ಧ. ನನ್ನ ಆಸ್ತಿ ತನಿಖೆ ಮಾಡಿಸಿ. ನಿಮ್ಮದೆ ಸರ್ಕಾರ ಇದೆ. ಸಿಎಂಗೆ ಹೇಳಿ ಯಾವ ತನಿಖೆ ಬೇಕೋ ಮಾಡಿಸಿ ಎಂದು ತಿರುಗೆಟು ನೀಡಿದ್ದಾರೆ.
ನನ್ನ ಆಸ್ತಿ ತನಿಖೆ ಆಗಲಿ. ಅದರ ಜೊತೆ ಮಾಕಳಿ ಗ್ರಾಮದ ಮೂರೂವರೆ ಎಕರೆ ಕೆರೆ ಜಾಗ ಸರ್ವೆ ನಂಬರ್ 13 ಕೆರೆನೇ ಮಾಯ ಆಗಿದೆ. ಆ ಕೆರೆ ಜಾಗ ನಾನು ನುಂಗಿ ಹಾಕಿದ್ದೀನಾ? ಆ ಕೆರೆ ನುಂಗಿ ಹಾಕಿದ್ದು ಯಾರು? ಇದು ತನಿಖೆ ಆಗಲಿ ಅಂತ ಚೆಲುವರಾಯಸ್ವಾಮಿ ವಿರುದ್ಧ ಕುಮಾರಸ್ವಾಮಿ ಆರೋಪಿಸಿದರು.
1962ರಲ್ಲಿ ದೇವೇಗೌಡರು ರಾಜಕೀಯಕ್ಕೆ ಬಂದರು. ಒಬ್ಬರು ಕಾರ್ಪೋರೇಟರ್, ಜಿಲ್ಲಾ ಪಂಚಾಯತಿ ಸದಸ್ಯ ಮಾಡಿರೋ ಹಣ ನಾನು ಮಾಡಿಲ್ಲ. ನಾನು ಸಿನಿಮಾದಲ್ಲಿ ದುಡಿದು 45 ಎಕರೆ ಜಾಗ ತೆಗೆದುಕೊಂಡಿದ್ದೇನೆ. ಬಲಗೈನಲ್ಲಿ ತೆಗೆದುಕೊಂಡು ಎಡಗೈನಲ್ಲಿ ದಾನ ಮಾಡಿದ್ದೇನೆ. ರಾಜಕೀಯಕ್ಕೆ ನಾನು ಹಣ ಮಾಡಿಲ್ಲ. ಪಕ್ಷ ಉಳಿಸೋಕೆ ನಾನು ಮಾಡಿದ್ದೇನೆ. ನಾನು ಇವರ ರೀತಿ ದುಡ್ಡು ಮಾಡಿಲ್ಲ ಎಂದರು.
ನಾನು 100% ಶುದ್ಧ ಇಲ್ಲ. ಇವತ್ತಿನ ರಾಜಕೀಯ ಅಧಿಕಾರ ದುಡ್ಡು ಇಲ್ಲದೆ ನಡೆಯಲ್ಲ. ಇದನ್ನು ಓಪನ್ ಆಗಿ ಹೇಳಿದ್ದೇನೆ. ಆದರೆ ಇವರ ರೀತಿ ಸರ್ಕಾರದ ಆದೇಶ ಮಾರಾಟಕ್ಕೆ ಇಟ್ಟಿಲ್ಲ. ಚುನಾವಣೆ ಬಂದಾಗ ನಾನು ಭಿಕ್ಷೆ ಬೇಡಿದ್ದೇನೆ. ಆದರೆ ನಾನು ಅಧಿಕಾರ ದುರ್ಬಳಕೆ ಮಾಡಿ ಕೊಂಡಿಲ್ಲ ಎಂದು ಕಿಡಿಕಾರಿದರು.