ಬೆಂಗಳೂರು, ನ.16 (DaijiworldNews/AK): ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ವರ್ಗಾವಣೆ ಅಥವಾ ಹಣದ ಬಗ್ಗೆಯಾಗಲಿ ಮಾತನಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ಮಾಜಿ ಶಾಸಕ ಯತೀಂದ್ರ ಅವರು ತಮ್ಮ ತಂದೆಯೊಂದಿಗೆ ವರ್ಗಾವಣೆ ಕುರಿತು ಮಾತನಾಡುತ್ತಿರುವ ಎನ್ನಲಾದ ವೀಡಿಯೋ ಕುರಿತು ಆರೋಪಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯೆ ನೀಡಿದರು.
ಒಎಸ್ಡಿ ಮಹದೇವ್ ಅವರಿಗೆ ಅಕ್ರಮವಾಗಿ ಬಡ್ತಿ ನೀಡಿ ಇಟ್ಟುಕೊಳ್ಳಲಾಗಿದೆ ಎಂಬ ಬಗ್ಗೆ ಉತ್ತರಿಸಿ ಮಹದೇವ್ ಅವರು ನಮ್ಮೂರಿನವರೇ, ಉಪನೋಂದಣಾಧಿಕಾರಿಯಾಗಿದ್ದಾರೆ. ಅವರನ್ನು ನಮ್ಮ ಕಚೇರಿಗೆ ತೆಗೆದುಕೊಳ್ಳಲಾಗಿದೆ. ಅದರಲ್ಲಿ ತಪ್ಪೇನು ಎಂದರು.
ವೀಡಿಯೋದಲ್ಲಿ ಹಣದ ಬಗ್ಗೆ ಮಾತನಾಡಿದ್ದಾರೆಯೇ? ಅಥವಾ ವರ್ಗಾವಣೆಯ ಬಗ್ಗೆ ಅದನ್ನು ವರ್ಗಾವಣೆಗೆ ತಳಕು ಹಾಕಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಇಂದಿನವರೆಗೆ ಒಂದು ವರ್ಗಾವಣೆಗೆ ಹಣ ಪಡೆದಿದ್ದೇನೆ ಎಂದು ನಿರೂಪಿಸಿದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಪುನರುಚ್ಚರಿಸಿದರು.
ಆಶ್ರಯ ಸಮಿತಿ ಅಧ್ಯಕ್ಷರು ಹಾಗೂ ಕೆಡಿಪಿ ಸದಸ್ಯರಾಗಿರುವ ಹಾಗೂ ಕ್ಷೇತ್ರವನ್ನು ನೋಡಿಕೊಳ್ಳುತ್ತಿರುವ ಯತೀಂದ್ರ ನನ್ನ ಬಳಿ ಮಾತನಾಡಿ ಸಿಎಸ್ಆರ್ ನಿಧಿಯ ಕುರಿತು ಪ್ರಶ್ನಿಸಿದಾಗ ಪಟ್ಟಿಯನ್ನು ಮಹದೇವಪ್ಪ ಅವರಿಗೆ ನೀಡಲಾಗಿದೆ ಎಂದು ತಿಳಿಸಿದೆ.
ಕುಮಾರಸ್ವಾಮಿ ಅವರ ಕಾಲದಲ್ಲಿ ಏನಾಗುತ್ತಿತ್ತೋ ಅದರಿಂದ ಹೊರಬರಲು ಅವರಿಗೆ ಆಗುತ್ತಿಲ್ಲ.ಮಾಜಿ ಮುಖ್ಯಮಂತ್ರಿಯಾಗಿ ತಮ್ಮ ಮನೆಗೆ ಅಕ್ರಮವಾಗಿ ವಿದ್ಯುತ್ ಪಡೆದು ಮನೆಯನ್ನು ಬೆಳಗಿಸಿದ್ದಾರೆ. ಇದು ಅಪರಾಧವಲ್ಲವೇ? ಎಂದು ಪ್ರಶ್ನಿಸಿದ ಸಿಎಂ ಅದನ್ನು ಮುಚ್ಚಿಹಾಕಲು ಈ ರೀತಿ ಮಾಡುತ್ತಿದ್ದಾರೆ ಎಂದರು.ಯಾರೇ ತಪ್ಪು ಮಾಡಿದರು ಎಫ್.ಐ.ಆರ್ ಆಗಬೇಕು. ಅದನ್ನು ಮುಚ್ಚಿಹಾಕಲು ಹೀಗೆ ಹೇಳುತ್ತಿದ್ದಾರೆ ಎಂದರು.
ಸಾಕ್ಷ್ಯ ಇಲ್ಲದೇ ಏನು ಬೇಕಾದರೂ ಹೇಳಬಹುದೇ? ಸಿಎಸ್ಆರ್ ನಿಧಿ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಕೇಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸಿಎಸ್ಆರ್ ನಿಧಿ ಬಗ್ಗೆ ಮಾತನಾಡಿರುವುದಕ್ಕೆ ದಾಖಲೆ ಇರುತ್ತದೆಯೇ? ಎಂದರು.