ಬೆಂಗಳೂರು, ನ 15 (DaijiworldNews/AK): ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಿನ ಮಾತಿನ ಜಟಪಟಿ ತಾರಕ್ಕಕ್ಕೇರಿದೆ. ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಟೀಕೆ ನಡೆಸುತ್ತಿದ್ದಾರೆ.
ಇತ್ತ ಕಾಂಗ್ರೆಸ್ ಕೂಡ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿದ್ದಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದ ವಿದ್ಯಮಾನಗಳ ಬಗ್ಗೆ ಡಿಕೆ ಶಿವಕುಮಾರ್ ಮಾಹಿತಿಯನ್ನ ಬಹಿರಂಗಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನನ್ನ ಸಿಎಂ ಮಾಡಿದ್ರೆ ವಾಪಸ್ ಬರುವುದಾಗಿ ಮುಂಬೈಗೆ ತೆರಳಿದ್ದ ಶಾಸಕರು ಹೇಳಿದ್ದರು. ಮುಂಬೈನಲ್ಲಿದ್ದ ಎಸ್.ಟಿ.ಸೋಮಶೇಖರ್, ಗೋಪಾಲಯ್ಯ ಹಾಗೆ ಹೇಳಿದ್ದರು. ಅಂದಿನ ಸಿಎಂ ಕುಮಾರಸ್ವಾಮಿಗೆ ಖುದ್ದು ಕರೆ ಮಾಡಿ ಹೇಳಿದ್ದರು.
ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವುದಾದರೆ ವಾಪಸ್ ಬರುತ್ತೇವೆ ಎಂದು ಹೇಳಿದ್ದರು. ಆದರೆ, ಶಾಸಕರ ಬೇಡಿಕೆ ಬಗ್ಗೆ ಕುಮಾರಸ್ವಾಮಿ ಆಗ ಬಾಯಿ ಬಿಡಲೇ ಇಲ್ಲ ಎಂದು ಹೇಳಿದರು.
ಶಾಸಕರ ಬೇಡಿಕೆ ಬಗ್ಗೆ ಆಗ ಬಾಯಿ ಬಿಡದ ಕುಮಾರಸ್ವಾಮಿ ಈಗ ಡಿ.ಕೆ.ಶಿವಕುಮಾರ್ ಸಿಎಂ ಆದರೆ 19 ಶಾಸಕರು ಬೆಂಬಲ ಕೊಡ್ತೀವಿ ಎಂದು ಹೇಳ್ತಾರೆ. ಕುಮಾರಸ್ವಾಮಿ ಮಾತನ್ನು ನಂಬುವುದಕ್ಕೆ ನಾವು ದಡ್ಡರಾ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.