ಬೆಂಗಳೂರು, ನ 15 (DaijiworldNews/AK): ತಮ್ಮ ನಿವಾಸದ ದೀಪಾಲಂಕಾರಕ್ಕೆ ಹೆಚ್ಡಿ ಕುಮಾರಸ್ವಾಮಿಯವರು ಅಕ್ರಮವಾಗಿ ವಿದ್ಯುತ್ ಪಡೆದಿದ್ದಾರೆ ಎಂದು ಕಾಂಗ್ರೆಸ ಆರೋಪ ಮಾಡಿತ್ತು. ಈ ಸಂಬಂಧ ಕಾಂಗ್ರೆಸ್ ವಿರುದ್ಧ ಜೆಡಿಎಸ್ ರಾಜ್ಯ ಘಟಕ ಆಕ್ರೋಶ ಹೊರಹಾಕಿದೆ.
ಹೆಚ್ಡಿ ಕುಮಾರಸ್ವಾಮಿ ವಿರುದ್ದ ಆರೋಪ ಮಾಡಿದ್ದ ಕಾಂಗ್ರೆಸ್ ವಿರುದ್ಧ ಸರಣಿ ಟ್ವಿಟ್ ಮೂಲಕ ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ. ಕೊಳಕು ಮಂಡಲ ಕಾಂಗ್ರೆಸ್ಗೆ ಅರ್ಜೆಂಟಾಗಿ ಜನರ ಗಮನ ಬೇರೆಡೆಗೆ ಸೆಳೆಯುವ ತುರ್ತು ಇತ್ತು. ಕುಮಾರಸ್ವಾಮಿ ನಡೆಸಿದ ಸರ್ಜಕಲ್ ಸ್ಟ್ರೈಕ್ಗೆ ಕೈ ಪಡೆ ಪತರಗುಟ್ಟಿ ಹೋಗಿತ್ತು. ಮಾರಿ ಉಳಿಸಿಕೊಳ್ಳಲು ಕಾಂಗ್ರೆಸ್ ಕರೆಂಟ್ ವೈರ್ ಮೊರೆ ಹೋಗಿದೆ. ವಿಕಾರ, ವಿಕೃತಿಗೆ ತುತ್ತಾಗಿ ಕತ್ತಲಾದ ಮೇಲೆ ಗೋಡೆ ಮೇಲೆ ಕಳ್ಳಕಳ್ಳವಾಗಿ ಪೋಸ್ಟರ್ ಅಂಟಿಸುವ ಶಿಖಂಡಿ ಸ್ಥಿತಿಗೆ ಬಂದಿದೆ ಎಂದು ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.
ಪಾಪ ಆ ಪಕ್ಷ ಭೂಗಳ್ಳ, ಕಲ್ಲುಕಳ್ಳ, ಕೊತ್ವಾಲನ ಶಿಷ್ಯನ ಕೈಗೆ ಸಿಕ್ಕಿ ಹುಚ್ಚುನಾಯಿಯಂತೆ ಒದ್ದಾಡುತ್ತಿದೆ. ಕುಮಾರಸ್ವಾಮಿ ಸ್ಪಷ್ಟನೆ ಕೊಟ್ಟ ಮೇಲೂ ಕಾಂಗ್ರೆಸ್ ವಿಕೃತಿ ಮಿತಿ ಮೀರಿದೆ. ಬೆಸ್ಕಾಂ ವಿದ್ಯುತ್ ವೇಗದಲ್ಲಿ ಎಫ್ಐಆರ್ ದಾಖಲಿಸಿದೆ. ಕುಮಾರಸ್ವಾಮಿ ಅವರು ತಿಹಾರ್ ಜೈಲಿಗೆ ಹೋಗುವ ತಪ್ಪೇನು ಮಾಡಿಲ್ಲ. ಈಡಿ, ಐಟಿ, ಸಿಬಿಐ ಅವರ ಬೆನ್ನತ್ತಿಲ್ಲ. ಪುಡಿರೌಡಿ, ಕಿಡಿಗೇಡಿ ಕುಮಾರನ ಕೈಚಳಕ್ಕೆ ಹೆದರುವ ಪ್ರಶ್ನೆಯೂ ಇಲ್ಲ. ಐಷಾರಾಮಯ್ಯನ ಮುಖ ಉಳಿಸಲು ಕರೆಂಟ್ ವೈರ್ ಹಿಡಿದು ಕೆಟ್ಟಿದೆ ಗುಜರಿ ಶಾಪ್ ಕಾಂಗ್ರೆಸ್. ಮಾಜಿ ಸಿಎಂ ಸ್ಪಷ್ಟನೆಗಿಂತ ನೀತಿಗೆಟ್ಟ ರಾಜಕಾರಣದಲ್ಲೇ ಹೆಚ್ಚು ನಂಬಿಕೆ ಎಂದು ಕಿಡಿಕಾರಿದರು.
ಕಂಡವರ ಭೂಮಿಗೆ ಬೇಲಿ ಹಾಕುವ ಕಿಡಿಗೇಡಿಕುಮಾರ ಪರ ಬ್ಯಾಟಿಂಗ್ ಬೀಸಿದ್ದು ಬಿಟ್ಟರೆ ಕೊಳಕುಮಂಡಲ ಕಾಂಗ್ರೆಸ್ ಕನ್ನಡಿಗರಿಗಾಗಿ ಕಿಸಿದಿದ್ದೇನೂ ಇಲ್ಲ. ರಾಜಕೀಯವಾಗಿ ಕುಮಾರಸ್ವಾಮಿ ಎದುರಿಸಲಾಗದ ನರಸತ್ತ ಪಕ್ಷ. ಕರೆಂಟ್ ವೈರ್ ಹಿಡಿದು ಶಕುನಿ ಯುದ್ದ ಆರಂಭಿಸಿದೆ. ಕುಮಾರಸ್ವಾಮಿ ಅವರ ಒಂದೇ ಒಂದು ಕ್ಷಿಪಣಿ ಸಾಕು. ಕಾಂಗ್ರೆಸ್ ರಕ್ಕಸ ರಿಪಬ್ಲಿಕ್ ಉಡೀಸ್ ಆಗಲಿಕ್ಕೆ ಶಿಖಂಡಿ ಅಂತ್ಯಕಾಲ ಆರಂಭವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.