ಮಂಡ್ಯ, ಏ 16(Daijiworld News/MSP): ಕರ್ನಾಟಕ ಲೋಕಸಮರದಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರದ ಅಭ್ಯರ್ಥಿಗಳ ಫೈಟ್ ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಹಾಗೂ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಬ್ಬರಿಗೂ ಮಾತ್ರವಲ್ಲದೇ ಪ್ರತಿಷ್ಟಿತ ರಾಜಕೀಯ ಪಕ್ಷಗಳಿಗೂ ಹೈವೋಲ್ಟೇಜ್ ಕ್ಷೇತ್ರವೆಂದೇ ಪರಿಗಣಿತವಾಗಿರುವ ಮಂಡ್ಯ ಕ್ಷೇತ್ರದಲ್ಲಿ ಲೋಕಸಮರ ಬಿಸಿ ತುಸು ಜೋರಾಗಿಯೇ ಇದೆ.
ಈ ನಡುವೆ ಇನ್ನೇನು ಚುನಾವಣೆಗೆ ಎರಡೇ ದಿನ ಬಾಕಿಯಾಗಿರುವಂತೆ ಕಿಡಿಗೇಡಿಗಳು ಮಂಡ್ಯ ಪಕ್ಷೇತರ ಅಭ್ಯರ್ಥಿ , ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಕ್ರಿಯಾಶೀಲರಾಗಿದ್ದ ಸುಮಲತಾ ಅಂಬರೀಷ್ ಅವರ ಫೇಸ್ ಬುಕ್ ಪೇಜ್ ಬ್ಲಾಕ್ ಮಾಡಿದ್ದಾರೆ. ಈ ಬಗ್ಗೆ ಸುಮಲತಾ ಅಂಬರೀಷ್ ಅವರೇ ಖುದ್ದು ಬರೆದುಕೊಂಡಿದ್ದು, "ಕುತಂತ್ರದ ಮುಂದುವರಿದ ಭಾಗವಾಗಿ ಕಿಡಿಗೇಡಿಗಳು ನಾನು ಜನರೊಂದಿಗೆ ಸಂಪರ್ಕದಲ್ಲಿದ್ದ ಅಧಿಕೃತ ಫೇಸ್ ಬುಕ್ ಪೇಜನ್ನು ಬ್ಲಾಕ್ ಮಾಡಿಸಿದ್ದಾರೆ. ಸಾಧ್ಯವಾದಷ್ಟು ಶೀಘ್ರದಲ್ಲಿ ಪೇಜ್ ನ್ನು ಪುನಃಸ್ಥಾಪಿಸಲು ನಮ್ಮ ತಾಂತ್ರಿಕ ತಂಡ ಕಾರ್ಯ ನಿರತವಾಗಿದೆ. ಶೀಘ್ರ ಪೇಜ್ ಅನ್ನು ರಿಲೋಡ್ ಮಾಡಲಿದ್ದಾರೆ. ಮುಂದಿನ ಬೆಳವಣಿಗೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ " ಎಂದು ಹೇಳಿದ್ದಾರೆ.
ಮಾತ್ರವಲ್ಲದೆ ಇದೀಗ ಹೊಸ ಫೇಸ್ ಬುಕ್ ಪೇಜ್ ತೆರೆದಿರುವ ಸುಮಲತಾ, ತಮ್ಮ ಫೇಸ್ ಬುಕ್ ಹಿಂಬಾಲಕರಲ್ಲಿ ಸಾಧ್ಯವಾದಷ್ಚೂ ಈ ಪೇಜ್ ಅನ್ನು ಷೇರ್ ಮಾಡಿ ಎಂದು ವಿನಂತಿಸಿಕೊಂಡಿದ್ದಾರೆ.