ಚಂಡಿಗಢ, ನ 15 (DaijiworldNews/AK): ಒಂದು ಬಾರಿ ಬೀದಿ ನಾಯಿ ಕಚ್ಚಿದರೆ ರಾಜ್ಯ ಸರ್ಕಾರ ಸಂತ್ರಸ್ತ ವ್ಯಕ್ತಿಗೆ 10,000 ರೂ. ಪರಿಹಾರ ನೀಡಬೇಕೆಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಬೀದಿ ನಾಯಿ, ಹಸು ಸೇರಿದಂತೆ ಬೀದಿ ಪ್ರಾಣಿಗಳ ದಾಳಿ ಪ್ರಕರಣದ ವೇಳೆ ಪರಿಹಾರ ಪಾವತಿಸುವ ವಿಚಾರದಲ್ಲಿ ಪ್ರಾಥಮಿಕವಾಗಿ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಹೊರಬೇಕು ಎಂದು ಹೇಳಿದೆ. ಅಲ್ಲದೇ ಪ್ರತಿ ಹಲ್ಲಿನ ಗುರುತಿಗೆ ಕನಿಷ್ಠ 10,000 ರೂ. ಮತ್ತು 0.2 ಸೆಂ.ಮೀ ಗಾಯಕ್ಕೆ ಕನಿಷ್ಠ 20,000 ರೂ. ಪರಿಹಾರ ಧನ ನೀಡಬೇಕೆಂದು ಸೂಚಿಸಿದೆ.
ಬಿಡಾಡಿ ಪ್ರಾಣಿಗಳ ದಾಳಿಗೆ ಸಂಬಂಧಿಸಿದ 193 ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್ ಈ ಮಹತ್ವದ ಆದೇಶ ಪ್ರಕಟಿಸಿದೆ. ಈ ರೀತಿಯ ಪ್ರಕರಣಗಳು ದಾಖಲಾದ ನಂತರ ಏಜೆನ್ಸಿ ಅಥವಾ ಖಾಸಗಿ ವ್ಯಕ್ತಿಯಿಂದ ರಾಜ್ಯ ಸರ್ಕಾರ ವಸೂಲಿ ಮಾಡಿ ಸಂತ್ರಸ್ತ ವ್ಯಕ್ತಿಗೆ ಪರಿಹಾರವನ್ನು ಪಾವತಿಸಬೇಕೆಂದು ಸೂಚಿಸಿದೆ.
ಅಲ್ಲದೇ ಈ ಕುರಿತಾಗಿ ಪಂಜಾಬ್, ಹರ್ಯಾಣ ಮತ್ತು ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢಕ್ಕೆ ಹೈಕೋರ್ಟ್ ಒಂದು ಸಮಿತಿಯನ್ನು ರಚಿಸುವಂತೆ ಸೂಚಿಸಿದೆ. ಈ ಸಮಿತಿ ಹಸು, ಎತ್ತು, ಕತ್ತೆ, ನಾಯಿ, ನೀಲಗಾಯ್, ಎಮ್ಮೆ ಮತ್ತು ಕಾಡು, ಸಾಕುಪ್ರಾಣಿಗಳ ದಾಳಿಯ ಪ್ರಕರಣಗಳಲ್ಲಿ ಪಾವತಿಸಬೇಕಾದ ಪರಿಹಾರವನ್ನು ನಿರ್ಧರಿಸಲಿದೆ.