ಬೆಂಗಳೂರು, ನ 15 (DaijiworldNews/HR): ಜಾತಿ ಅನ್ನುವುದನ್ನು ಬಿಟ್ಟು ನಾನು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರೆಂದು ಭಾವಿಸಿ ಒಗ್ಗಟ್ಟಿನಿಂದ ಪಕ್ಷಕ್ಕೆ ಕೆಲಸ ಮಾಡೋಣ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಇಂದು ಕರ್ನಾಟಕ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ವಿಜಯೇಂದ್ರ ಅವರಿಗೆ ನಳಿನ್ ಕುಮಾರ್ ಕಟೀಲ್ ಅವರು ಪಕ್ಷದ ಬಾವುಟವನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ರಾಷ್ಟೀಯ ಅಧ್ಯಕ್ಷ ಜೆಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರ ಅಶೀರ್ವಾದದಿಂದ ನಾನು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದೇನೆ. ರಾಜ್ಯದ ಕಾರ್ಯಕರ್ತರು ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಇನ್ನು ನನಗೆ ಅಧ್ಯಕ್ಷ ಸ್ಥಾನ ಸಿಗುತ್ತದೆ ಎಂದು ನಾನು ನಿರೀಕ್ಷೆಯೇ ಮಾಡಿರಲಿಲ್ಲ. ಜೆಪಿ ನಡ್ಡಾ ಅವರು ನನ್ನ ಹೆಸರನ್ನು ಘೋಷಣೆ ಮಾಡಿದ ಮರುಕ್ಷಣದಿಂದ ಎಲ್ಲಾ ನಾಯಕರು ವೈಯಕ್ತಿಕವಾಗಿ ನನಗೆ ಶುಭ ಹಾರೈಸಿದ್ದಾರೆ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.