ಚಿಕ್ಕಬಳ್ಳಾಪುರ,ನ 14 (DaijiworldNews/RA): ಪಟಾಕಿಯ ಕಿಡಿಗೆ ಗುಜರಿ ಅಂಗಡಿ ಹೊತ್ತಿ ಉರಿದ ಘಟನೆಯೊಂದು ನಡೆದಿದೆ. ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ದೇವನ ಹಳ್ಳಿ ತಾಲೂಕಿನ ವಿಜಯಪುರ ಪಟ್ಟಣ ಬೈಪಾಸ್ ರಸ್ತೆಯ ಮಂಡಿಬೆಲೆ ಎಂಬಲ್ಲಿ ಈ ಅವಘಡ ಸಂಭವಿಸಿದೆ.
ವಿಜಯಪುರ ಪಟ್ಟಣದ ಭರತ್ ನಗರದ ವಾಸಿ ಮುಬಾರಕ್ ಎಂಬವರಿಗೆ ಸೇರಿದ ಗುಜರಿ ಅಂಗಡಿ ಇದಾಗಿದ್ದು, ಬೆಂಕಿಯ ಕೆನ್ನಾಲಿಗೆಗೆ ಗುಜರಿ ಅಂಗಡಿಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ.
ಘಟನೆಯ ಕುರಿತು ಮಾಧ್ಯಮಗಳಿಗೆ ಅಂಗಡಿ ಮಾಲಿಕ ಮುಬಾರಕ್ ಪ್ರತಿಕ್ರಿಯೆ ನೀಡಿದ್ದು ರಾತ್ರಿ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದೆ.ಬೆಂಕಿ ಹೊತ್ತಿ ಉರಿಯುವ ಸಂದರ್ಭ ಬಂದು ನೋಡಿದಾಗ ಬೆಂಕಿ ಎಲ್ಲಾ ಕಡೆ ಆವರಿಸಿತ್ತು. ಸುಮಾರು ಎರಡರಿಂದ ಮೂರು ಲಕ್ಷ ಗುಜರಿ ಸಾಮಗ್ರಿ ನಷ್ಟವಾಗಿದೆ ಎಂದರು.
ಸ್ಥಳಕ್ಕೆ ದೇವನಳ್ಳಿಯ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ದೀಪಾವಳಿ ಪ್ರಯುಕ್ತ ಪಟ್ಟಣದಾದ್ಯಂತ ಪಟಾಕಿ ಸಿಡಿಸುತ್ತಿದ್ದ ಸಂದರ್ಭ ಪಟಾಕಿ ಕಿಡಿ ಗುಜರಿ ಅಂಗಡಿಗೆ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.ಈ ಬಗ್ಗೆ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.