ಮಧ್ಯಪ್ರದೇಶ, ನ 14 (DaijiworldNews/RA): ಪ್ರಧಾನಿ ಮೋದಿ,ಗೃಹ ಸಚಿವ ಅಮಿತ್ ಶಾ ಮಧ್ಯಪ್ರದೇಶದಲ್ಲಿ ನಮ್ಮ ಶಾಸಕರನ್ನು ಖರೀದಿಸಿ ಸರ್ಕಾರವನ್ನು ಕದಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಸಂಸದ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.
ಮಧ್ಯಪ್ರದೇಶದ ವಿದಿಶಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಈ ಕುರಿತು ಮಾತನಾಡಿದ ರಾಹುಲ್, 2020 ರಲ್ಲಿ ಕಮಲ್ ನಾಥ್ ಸರ್ಕಾರದ ಪತನಕ್ಕೆ ಕಾರಣವಾದ 22 ಶಾಸಕರ ಬಂಡಾಯವನ್ನು ಉಲ್ಲೇಖಿಸಿದ ರಾಹುಲ್ ಜನಸಾಮಾನ್ಯರ ಧ್ವನಿಯನ್ನು ಬಿಜೆಪಿ “ನುಚ್ಚುನೂರು” ಮಾಡಿದೆ ಎಂದಿದ್ದಾರೆ.
“ಐದು ವರ್ಷಗಳ ಹಿಂದೆ ನೀವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಸರ್ಕಾರಕ್ಕೆ ಆಯ್ಕೆ ಮಾಡಿದ್ದೀರಿ.ನೀವು ಬಿಜೆಪಿಯನ್ನು ಆಯ್ಕೆ ಮಾಡಿಲ್ಲ. ಆದರೆ ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿದ್ದೀರಿ. ನಂತರ ಬಿಜೆಪಿ ನಾಯಕರು- ನರೇಂದ್ರ ಮೋದಿ, ಶಿವರಾಜ್ ಸಿಂಗ್ ಚೌಹಾಣ್ ಮತ್ತು ಅಮಿತ್ ಶಾ ಶಾಸಕರನ್ನು ಖರೀದಿಸಿ ಚುನಾಯಿತ ಸರ್ಕಾರವನ್ನು ಕದಿದ್ದಾರೆ ಎಂದರು.ಕೋಟ್ಯಂತರ ರೂಪಾಯಿ ಕೊಟ್ಟು ಕಾಂಗ್ರೆಸ್ ಪಕ್ಷದ ಶಾಸಕರನ್ನು ಖರೀದಿಸುವ ಮೂಲಕ ನಿಮ್ಮ ನಿರ್ಧಾರ, ನಿಮ್ಮ ಹೃದಯದ ಧ್ವನಿಯನ್ನು ಬಿಜೆಪಿ ನಾಯಕರು, ಪ್ರಧಾನಿ ಪುಡಿ ಮಾಡಿದ್ದಾರೆ.ನೀವು ಮೋಸ ಹೋಗಿದ್ದೀರಿ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಹೊರಹಾಕುತ್ತದೆ ಎಂದು ಕಿಡಿಕಾರಿದರು.
“ನಾವು ಬಿಜೆಪಿ ವಿರುದ್ಧ ಹೋರಾಡುತ್ತೇವೆ. ಕರ್ನಾಟಕದಲ್ಲಿ, ಹಿಮಾಚಲ ಪ್ರದೇಶದಲ್ಲಿ ನಾವು ಅವರನ್ನು ಓಡಿಸಿದ್ದೇವೆ. ಆದರೆ ದ್ವೇಷದಿಂದ ಅಲ್ಲ. ನಾವು ‘ನಫ್ರತ್ ಕಾ ಬಜಾರ್’ನಲ್ಲಿ ‘ಮೊಹಬ್ಬತ್ ಕಿ ದುಕಾನ್’ ತೆರೆದಿದ್ದೇವೆ. ನಾವು ಅಹಿಂಸೆಯ ಸೈನಿಕರು, ನಾವು ಹೊಡೆಯುವುದಿಲ್ಲ, ಆದರೆ ನಾವು ಅವರನ್ನು ಪ್ರೀತಿಯಿಂದ ಓಡಿಸಿದೆವು, ಅವರಿಗೆ ಇಲ್ಲಿ ಸ್ಥಾನವಿಲ್ಲ ಎಂದು ಹೇಳಿದೆವು, ನೀವು ಕರ್ನಾಟಕವನ್ನು ಲೂಟಿ ಮಾಡಿದ್ದೀರಿ, 40% ಸರ್ಕಾರವನ್ನು ನಡೆಸುತ್ತೀರಿ, ಆದ್ದರಿಂದ ಹೋಗಿ, ಇಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಬರುತ್ತದೆ ಎಂದ ಅವರು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 145-150 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಇನ್ನು ಇದೇ ವೇಳೆ ಬಿಜೆಪಿ ಸದಸ್ಯ ಶಿವರಾಜ್ ಸಿಂಗ್ ಚೌಹಾಣ್ ಅವರು ಕಾಂಗ್ರೆಸ್ ಪಕ್ಷದ ಸರ್ಕಾರವು “ಮನರಂಜನಾ ಸರ್ಕಾರ” ಎಂದು ವ್ಯಂಗ್ಯವಾಡಿದ್ದಾರೆ. ಸಹೋದರ ರಾಹುಲ್ ಗಾಂಧಿ ಮತ್ತು ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಜೋಡಿಯು ಮನರಂಜನೆಗಾಗಿ ಮಾತ್ರ ರಾಜ್ಯಕ್ಕೆ ಬರುತ್ತಾರೆ ಎಂದರು.