ಬೆಂಗಳೂರು, ನ 14 (DaijiworldNews/MS): "ಹೆಚ್ಡಿಕೆ ಗೆ ಎಲ್ಲೆಲ್ಲಿ ಮನೆಗಳಿವೆ, ಎಲ್ಲಿ ಏನಾಗ್ತಿದೆ ಎಂದು ಗೊತ್ತಾಗಲ್ಲ ಪಾಪ " ಎಂದು ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ತಿರುಗೇಟು ನೀಡಿದೆ.
ದೀಪಾವಳಿ ಹಿನ್ನಲೆ ಬೆಂಗಳೂರಿನ ಜೆಪಿ ನಗರದಲ್ಲಿರುವ ಹೆಚ್ಡಿಕೆ ನಿವಾಸದ ದೀಪಾಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಪಡೆದಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಆದರೆ ಇದಕ್ಕೆ ಟಾಂಗ್ ಕೊಟ್ಟಿದ್ದ ಹೆಚ್ಡಿಕೆ "ಖಾಸಗಿ ಡೆಕೋರೇಟರ್ ಮಾಡಿದ ಕೆಲಸ ನನ್ನ ಗಮನಕ್ಕೆ ಬಂದ ತಕ್ಷಣ ಸರಿಪಡಿಸಿದ್ದೇನೆ. ನಾನೇನು ರಾಜ್ಯದ ಆಸ್ತಿ ಕಬಳಿಸಿಲ್ಲ. ಕಂಡವರ ಭೂಮಿಗೆ ಬೇಲಿ ಹಾಕಿಲ್ಲ. ಬೆಸ್ಕಾಂ ಕ್ರಮ ಕೈಗೊಳ್ಳಲಿ. ಈ ಅಚಾತುರ್ಯಕ್ಕೆ ನನ್ನ ವಿಷಾದವಿದೆ. ಬೆಸ್ಕಾಂ ಅಧಿಕಾರಿಗಳು ಬಂದು ಪರೀಕ್ಷೆ ಮಾಡಿ ನೋಟಿಸ್ ನೀಡಲಿ. ದಂಡ ಕಟ್ಟುತ್ತೇನೆ ಎಂದು ಹೇಳಿದ್ದರು.
ಈ ಹೇಳಿಕೆಗೆ ಕಾಂಗ್ರೆಸ್ ‘ರಾಜ್ಯದ ಮುಖ್ಯಮಂತ್ರಿಯಾಗಿದ್ದ ತಾವು, ಕರೆಂಟ್ ಕಳ್ಳತನವನ್ನು ಕ್ಷುಲ್ಲುಕ ವಿಚಾರ ಎಂದು ತಿಪ್ಪೆ ಸಾರಿಸುತ್ತಿರುವುದಕ್ಕೆ ನಾಚಿಕೆಯಾಗಬೇಕು. ಹೀಗೆಯೇ ಇನ್ನೆಷ್ಟು ರಾಜ್ಯದ ಲೂಟಿಯನ್ನು “ಕ್ಷುಲ್ಲುಕ ವಿಚಾರ”ವೆಂದು ಸಮರ್ಥಿಸಿಕೊಳ್ಳುವಿರೋ ಏನೋ! ತಮ್ಮ ತಪ್ಪನ್ನು ಕೆಲಸದವರ ಮೇಲೆ ಹಾಕಿ ತಪ್ಪಿಸಿಕೊಳ್ಳುವ ಕುಟೀಲ ಪ್ರಯತ್ನ ತಮ್ಮದು, ಹಿಟ್ ಅಂಡ್ ರನ್ ನಿಮ್ಮ ಕಾಯಕ ಆಗಿದ್ದು, ನಿಮ್ಮ ಪಲಾಯನವಾದದ ಭಾಗವಲ್ಲವೇ ಎಂದು ಪ್ರಶ್ನಿಸಿದೆ.
ಜೊತೆಗೆ ಮುಖ್ಯಮಂತ್ರಿಗಳ ಗೃಹ ಕಚೇರಿಯ 1.9 ಲಕ್ಷದ ಪೀಠೋಪಕರಣಗಳಿಗೆ 1.9 ಕೋಟಿ ಎಂದು ತಾವು ಸುಳ್ಳು ಆರೋಪ ಮಾಡಿದಾಗ ತಮ್ಮದು ಕ್ಷುಲ್ಲುಕ ಬುದ್ಧಿಯಾಗಿತ್ತೇ?, ಗ್ಯಾರಂಟಿಗಳ ಬಗ್ಗೆ ರಾಜ್ಯದ ಜನತೆಗೆ ಸುಳ್ಳು ಸಂದೇಶ ಕೊಡುತ್ತಿದ್ದೀರಲ್ಲ, ಅದು ನಿಮ್ಮ ಕ್ಷುಲ್ಲುಕ ಬುದ್ಧಿಯೋ, ಪ್ರಚಾರ ಗಿಟ್ಟಿಸಿಕೊಳ್ಳುವ ಹಪಹಪಿಯೋ?, ಅಂದಹಾಗೆ ತಾವು ಅಕ್ರಮ ಸಂಪರ್ಕ ಪಡೆದಾಗ ಕರ್ನಾಟಕ ಕತ್ತಲೆಯಲ್ಲಿ ಇರಲಿಲ್ಲ ಅಲ್ಲವೇ, ತಮ್ಮ ದೀಪಾಲಂಕಾರಕ್ಕೆ ಯಾವುದೇ ತೊಂದರೆಯಾಗಲಿಲ್ಲ ಅಲ್ಲವೇ?, ದೀಪಾಲಂಕಾರದ ಅದ್ದೂರಿತನ ತೋರುವಾಗ ರಾಜ್ಯದ ಬರ ನೆನಪಾಗಲಿಲ್ಲವೇ ಎನ್ನುವ ಮೂಲಕ ತಿರುಗೇಟು ನೀಡಿದೆ.