ಹುಬ್ಬಳ್ಳಿ, ನ 14(DaijiworldNews/PC): "ಬಿಜೆಪಿ ರಾಜ್ಯಾಧ್ಯಕ್ಷನಾಗಿ ಬಿ.ವೈ. ವಿಜಯೇಂದ್ರ ಆಯ್ಕೆ ಕೆಲವರಲ್ಲಿ ಅಸಮಾಧಾನವಾಗಿರುವುದು ನಿಜ. ಆದರೆ ಆ ಸ್ಥಾನಕ್ಕೆ ಅವರ ಆಯ್ಕೆ ಸೂಕ್ತ" ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕನ ಆಯ್ಕೆ ವಿಳಂಬವಾಗಿತ್ತು. ಇದೀಗ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ದೀಪಾವಳಿ ಉಡುಗೊರೆಯಾಗಿ ನಮಗೆ ವಿಜಯೇಂದ್ರ ಅವರನ್ನು ಪಕ್ಷ ನೀಡಿದೆ. ನಾವು ಅವರ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತೇವೆ. ಮೂರನೇ ಸಲ ಮೋದಿ ಅವರನ್ನು ಪ್ರಧಾನಿಯನ್ನು ಮಾಡಬೇಕಿದೆ. ಆ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಮತ್ತೆ ಬಿಜೆಪಿಯನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರುತ್ತೇವೆ" ಎಂದು ಹೇಳಿದ್ದಾರೆ.
ವಿಜಯೇಂದ್ರ ಆಯ್ಕೆಯಿಂದ ಕೆಲವರಿಗೆ ಅಸಮಾಧಾನವಾಗಿರುವುದು ಸಹಜ. ಪ್ರತಿಕ್ಷೇತ್ರದಲ್ಲಿ ರಾಜ್ಯಾಧ್ಯಕ್ಷ ಆಗುವ ಸಾಮರ್ಥ್ಯವಿರುವ ವ್ಯಕ್ತಿಗಳಿದ್ದಾರೆ. ಆದರೆ ಆ ಸ್ಥಾನ ಒಬ್ಬರಿಗೆ ಮಾತ್ರ ನೀಡಬೇಕಾಗಿರುವುದರಿಂದ ಅಳೆದು ತೂಗಿ ವಿಜಯೇಂದ್ರ ಅವರನ್ನು ಆಯ್ಕೆ ಮಾಡಲಾಗಿದೆ. ಸಿ.ಟಿ. ರವಿ ಕೂಡ ಆಕಾಂಕ್ಷಿಯಾಗಿದ್ದರು. ಆದರೆ ಬೇರೆ ಬೇರೆ ಕಾರಣದಿಂದ ವಿಜಯೇಂದ್ರ ಅವರನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ಅಸಮಾಧಾನ ಸಹಜ. ಆದರೆ ಇದೆಲ್ಲವೂ ಸರಿಯಾಗಲಿದೆ. ಸಿ.ಟಿ. ರವಿ ಎಂದು ನಾನು ಬಲ್ಲವಾನಾಗಿರುವುದರಿಂದ ಅವರೇ ಮುಂದೆ ನಿಂತು ಎಲ್ಲವನ್ನು ಸರಿ ಮಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.