ರಾಜಸ್ಥಾನ, ನ 14 (DaijiworldNews/MR): ಹೆತ್ತವರ ಆಸೆಯಂತೆ ವೈದ್ಯೆಯಾದ ಯುವತಿ, ಬಳಿಕ ಸರ್ಕಾರಿ ಸೇವೆ ಸಲ್ಲಿಸಲು ಐಎಎಸ್ ಅಧಿಕಾರಿಯಾಗುವ ಮೂಲಕ ಯುವಜನತೆಗೆ ಮಾದರಿಯಾಗಿದ್ದಾರೆ.
ಐಎಎಸ್ ಮುದಿತಾ ಶರ್ಮಾ ರಾಜಸ್ಥಾನದ ನಾಗೌರ್ ಜಿಲ್ಲೆಯ ಮೆರ್ಟಾ ಪಟ್ಟಣದ ನಿವಾಸಿ. ಚಿಕ್ಕಂದಿನಿಂದಲೂ ಓದಿನಲ್ಲಿ ಚುರುಕಾಗಿದ್ದ ಮುದಿತಾ 10ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯದಲ್ಲೇ 15ನೇ ಸ್ಥಾನ ಪಡೆದಿದ್ದರು. ಮುದಿತಾ ಶರ್ಮಾ ಅವರ ತಂದೆ ಭಗವತಿ ಲಾಲ್ ಶರ್ಮಾ ಅವರು ಮೆರ್ಟಾದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಂಶುಪಾಲರಾಗಿದ್ದಾರೆ. ತಾಯಿ ಗೃಹಿಣಿಯಾದರೂ ಬಿ.ಎಡ್ ಮಾಡಿದ್ದಾರೆ.
12ನೇ ತರಗತಿ ನಂತರ, ಮುದಿತಾ ಜೋಧ್ಪುರದ ಎಸ್ ಎನ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮಾಡಿದ್ದರು. ಬಳಿಕ ಜೈಪುರದ ಖಾಸಗಿ ಆಸ್ಪತ್ರೆಗೆ ಸೇರಿ ಸೇವೆ ಸಲ್ಲಿಸಿದರು. ಬಳಿಕ ತನ್ನ ಬಾಲ್ಯದ ಐಎಎಸ್ ಅಧಿಕಾರಿಯಾಗುವ ಕನಸನ್ನು ಇಡೇರಿಸಲು ಎಂದು ಅವರು ನಿರ್ಧರಿಸಿದರು. ಇದಕ್ಕಾಗಿ ವೈದ್ಯ ವೃತ್ತಿ ಬಿಟ್ಟು UPSC ಗೆ ಸಂಪೂರ್ಣವಾಗಿ ತಯಾರಿ ನಡೆಸಲು ಆರಂಭಿಸಿದರು.
ವೈದ್ಯ ವೃತ್ತಿಯನ್ನು ತೊರೆದು ದೆಹಲಿಯಲ್ಲಿ ಒಂದು ವರ್ಷ ಯುಪಿಎಸ್ ಸಿ ಕೋಚಿಂಗ್ ಪಡೆದರು. ನಂತರ ದೆಹಲಿಯಲ್ಲಿ ಓದು ಮುಂದುವರಿಸಿದ ಮುದಿತಾ ಶರ್ಮಾ ತಮ್ಮ ಮೊದಲ ಪ್ರಯತ್ನದಲ್ಲೇ UPSC 2022ರ ಬ್ಯಾಚ್ನಲ್ಲಿ ಅಖಿಲ ಭಾರತ 381ನೇ ರ್ಯಾಂಕ್ ಗಳಿಸಿ ತಮ್ಮ ಕನಸಿನ ಐಎ ಎಸ್ ಅಧಿಕಾರಿಯಾಗಿ ಯಶಸ್ಸು ಸಾಧಿಸಿದರು.
UPSC ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಮುದಿತಾ ಶರ್ಮಾ ಅವರ ಸಲಹೆಯೆಂದರೆ, ಟೈಮ್ ಟೇಬಲ್ ತಯಾರಿಸಿಕೊಳ್ಳಬೇಕು. ತಯಾರಿಯ ಸಮಯದಲ್ಲಿ ಆನ್ ಲೈನ್ ಪರೀಕ್ಷೆಗಳನ್ನು ಬರೆಯುವ ಪ್ರಯತ್ನ ಮಾಡಬೇಕು. ಯುಪಿಎಸ್ ಸಿ ತಯಾರಿಗಾಗಿ ಟೈಮ್ ಟೇಬಲ್ ಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ಮುದಿತಾ ಶರ್ಮಾ ಐಎಎಸ್ ನ ಸಂದರ್ಶನದಲ್ಲಿ ಹೇಳಿದ್ದಾರೆ. ನಿಗದಿತ ವೇಳಾಪಟ್ಟಿಯು ಸಮಯಕ್ಕೆ ಸರಿಯಾಗಿ ನಮ್ಮ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ ಎನ್ನುವುದು ಅವರ ಸಲಹೆ.