ಬೆಂಗಳೂರು, ನ 13 (DaijiworldNews/AK):ನಿಮಗೆ ಯಾಕೆ ರಾಜ್ಯದ ಬಡವರ ಮೇಲೆ ಈ ಪರಿಯ ದ್ವೇಷ ಎಂದು ಸಿಎಂ ಸಿದ್ದರಾಮಯ್ಯ ಅವರು ಮಾಜಿ ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದ್ದು, ಅಧಿವೇಶನದಲ್ಲಿ ದಾಖಲೆ ಸಹಿತ ಚರ್ಚೆಗೆ ಸಿದ್ಧನಿದ್ದೇನೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಅಲ್ಲದೆ, ಸಿದ್ದರಾಮಯ್ಯ ಅವರು ಟೆಂಪರೆರಿ ಸಿಎಂ ಅಂತಾನೂ ಟೀಕಿಸಿದರು. ಈ ಬಗ್ಗೆ ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ, ನಿಮಗೆ ಯಾಕೆ ರಾಜ್ಯದ ಬಡವರ ಮೇಲೆ ಈ ಪರಿಯ ದ್ವೇಷ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ, ಸುಳ್ಳು ಆರೋಪಗಳ ಮೂಲಕ ದಿನನಿತ್ಯ ನನ್ನ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕುಮಾರಸ್ವಾಮಿ ಅವರೇ, ನನ್ನನ್ನು ಟೀಕಿಸುವುದರಿಂದ ನಿಮ್ಮ ಮನಸಿಗೆ ಶಾಂತಿ ಸಿಗುವುದಿದ್ದರೆ ನಿಮ್ಮ ದ್ವೇಷಾಸೂಯೆ ಮುಂದುವರಿಯಲಿ ಎಂದು ವಾಗ್ದಳಿ ನಡೆಸಿದ್ದಾರೆ.
ಚುನಾವಣಾ ಸೋಲಿನ ನಿಮ್ಮ ನಿರಾಶೆ, ಅದರಿಂದಾಗಿರುವ ಹತಾಶೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ರಾಜ್ಯದ ಬಡವರನ್ನು ಯಾಕೆ ಈ ರೀತಿ ದ್ವೇಷಿಸುತ್ತಿದ್ದೀರಿ. ಬಡವರ ಕಲ್ಯಾಣಕ್ಕಾಗಿಯೇ ರೂಪಿಸಲಾಗಿರುವ ಯೋಜನೆಗಳನ್ನು ಯಾಕೆ ವಿರೋಧಿಸುತ್ತಿದ್ದೀರಿ? ಕಳೆದ ಚುನಾವಣೆಯಲ್ಲಿ ಅವರು ನಿಮ್ಮ ಪಕ್ಷವನ್ನು ತಿರಸ್ಕರಿಸಿದ್ದಕ್ಕಾಗಿ ದ್ವೇಷವೇ ಎಂದು ಪ್ರಶ್ನಿಸಿದ್ದಾರೆ.