ಬೆಂಗಳೂರು: ನ 13 (DaijiworldNews/MR): ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ನಗರದ ನಾಲ್ಕು ಕಡೆಗಳಲ್ಲಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ನಗದು, ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳ ವಿರುದ್ಧ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ.ಚಾಮರಾಜ ಪೇಟೆಯಲ್ಲಿ ವೆಂಕಟೇಶ, ಬಸವನಗುಡಿಯಲ್ಲಿ ಎಎಸ್ ಐ ಪುತ್ರಿ ಶೀಲ, ಕಾಮಾಕ್ಷಿ ಪಾಳ್ಯದ ರೌಡಿ ಶೀಟರ್ ಜಗದೀಶ್ ಅಲಿಯಾಸ್ ಟಾಮಿ, ಬಸವೇಶ್ವರ ನಗರದಲ್ಲಿ ಒಬ್ಬರ ಮನೆ ಮೇಲೆ ದಾಳಿ ನಡೆದಿದೆ.
ದಾಳಿ ವೇಳೆ 42,42,000 ರೂ. ಮೌಲ್ಯದ ನಗದು, ಚಿನ್ನಾಭರಣ ಸೇರಿ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ 23,42,400 ರೂ. ನಗದು, 7,00,000 ರೂ. ಮೌಲ್ಯದ 127 ಗ್ರಾಂ ಚಿನ್ನಾಭರಣ, 10 ಕೆಜಿ ಬೆಳ್ಳಿ, ಚೆಕ್ ಗಳು, ಡಿಮಾಂಡ್ ಪ್ರಾಮಿಸರಿ ನೋಟ್, ಖಾಲಿ ಬಾಂಡ್ ಪೇಪರ್, ಶುದ್ಧ ಕ್ರಯ ಪ್ರತ್ರಗಳು, ಸಾಲ ನಮೂದಿಸಿದ ದಾಖಲಾತಿ, ಇ- ಸ್ಪಾಂಪ್ ಪೇಪರ್ ಗಳು, ಪಾಕೆಟ್ ಪುಸ್ತಕ, ಅಗ್ರಿಮೆಂಟ್ ಪ್ರತಿಗಳು, ರೋಲೆಕ್ಸ್ ವಾಚ್ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಸುಮಾರು 40 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಡ್ಡಿಗೆ ಸಾಲ ಕೊಟ್ಟು ಸಾರ್ವಜನಿಕರಿಂದ ಹೆಚ್ಚಿನ ಬಡ್ಡಿ ವಸೂಲಿ ಮಾಡುವ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.