ಬೆಂಗಳೂರು, ನ 13 (DaijiworldNews/AK): ಪಟಾಕಿ ಮಾರಾಟಗಾರರು 600 ಕೆಜಿಗೂ ಹೆಚ್ಚು ತೂಕದ ಪಟಾಕಿ ಸಂಗ್ರಹ ಹಾಗೂ ಮಾರಾಟಕ್ಕೆ ಜಿಲ್ಲಾಧಿಕಾರಿಗಳು ಪರವಾನಗಿ ನೀಡಬಾರದು ಎಂದು ಹೈಕೋರ್ಟ್ ಆದೇಶಿಸಿದೆ.
ಪಟಾಕಿ ಸಂಗ್ರಹ ಮಾಡುವಲ್ಲಿ ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಬೆಂಕಿಯ ಕಿಡಿ ಕಟ್ಟಡವನ್ನೇ ದಹಿಸಬಹುದಾಗಿದೆ. ಪರವಾನಿಗೆ ನೀಡುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಲು ಇದು ಸಕಾಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಹೇಳಿದೆ.
ಅಲ್ಲದೆ, ಪಟಾಕಿ ಮಾರಾಟಕ್ಕೆ ಪರವಾನಿಗೆ ನೀಡುವ ಸಂದರ್ಭದಲ್ಲಿ ಸ್ಫೋಟಕಗಳ ಕಾಯಿದೆಯಲ್ಲಿ ಉಲ್ಲೇಖಿಸಿರುವಂತೆ ಪಟಾಕಿ ಸಂಗ್ರಹಾಗಾರಗಳು ವಸತಿ ಪ್ರದೇಶದಿಂದ ದೂರದಲ್ಲಿರಬೇಕು.
ಅಗ್ನಿ ಶಾಮಕಗಳು ಲಭ್ಯ ಇರಬೇಕು. ಪಟಾಕಿ ಸಂಗ್ರಹಾಗಾರಗಳಲ್ಲಿ ನೀರಿನ ಬಕೆಟ್ಗಳ ಸಂಗ್ರಹವೂ ಇರಬೇಕಿದ್ದು ಪರವಾನಿಗಿ ಪಡೆದ ಅಂಗಡಿಗಳಲ್ಲಿ ನಿಯಮ ಹಾಗೂ ಸುರಕ್ಷತಾ ಕ್ರಮ ಉಲ್ಲಂಘನೆಯಾಗಿದ್ದ ಕಾಲಕಾಲಕ್ಕೆ ಪರಿಶೀಲನೆ ನಡೆಸಿ ಅಂತಹ ಪರವಾನಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಕಳೆದ ಕೆಲವು ದಿನಗಲ ಹಿಂದೆ ಅತ್ತಿಬೆಲೆಯಲ್ಲಿ ಅಗ್ನಿ ದುರಂತ ನಡೆದು ಹಲವು ಮಂದಿ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ತಮ್ಮ ಪರವಾನಿಗೆ ರದ್ದುಪಡಿಸಿದ್ದ ಕ್ರಮ ಪ್ರಶ್ನಿಸಿ ಬೆಂಗಳೂರು ಪೂರ್ವ ತಾಲೂಕಿನ ಬಿದಬಿದರಹಳ್ಳಿ ಹೋಬಳಿಯ ವೀರನಹಳ್ಳಿ ಗ್ರಾಮದ ನಿವಾಸಿ ಕಲಾವತಿ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.