ಬೆಂಗಳೂರು, 13 (DaijiworldNews/AK): ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಇಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆದರು.
ಇದೇವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಎಸ್.ಎಂ.ಕೃಷ್ಣ ಅವರು, ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ವಿಜಯೇಂದ್ರರನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ. ಹತ್ತಾರು ವರ್ಷಗಳಿಂದ ಬಿಜೆಪಿಯನ್ನು ಕರ್ನಾಟಕದಲ್ಲಿ ಭದ್ರವಾದ ಬುನಾದಿಯ ಮೇಲೆ ಕಟ್ಟಲು ಯಡಿಯೂರಪ್ಪನವರು ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಯಡಿಯೂರಪ್ಪನವರು ಬಿಜೆಪಿಯನ್ನು ರಾಜ್ಯದಲ್ಲಿ ಒಂದು ಭದ್ರ ತಳಪಾಯ ಹಾಕಿ ಕಟ್ಟಿ ಬೆಳೆಸಿದ್ದಾರೆ, ಅದನ್ನು ಬೃಹತ್ತಾಗಿ ಬೆಳೆಸುವ ದೊಡ್ಡ ಜವಾಬ್ದಾರಿಯನ್ನು ವಿಜಯೇಂದ್ರ ಮೇಲೆ ಹೊರಿಸಲಾಗಿದೆ ಎಂದರು.
ಯುವ ನಾಯಕನಲ್ಲಿರುವ ಸಾಮರ್ಥ್ಯ ಮತ್ತು ಕ್ಷಮತೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಜೆಪಿ ನಡ್ಡಾ ಗುರುತಿಸಿದ್ದಾರೆ. ಮುಂಬರುವ ಲೋಕಸಭಾ ಮತ್ತು ಸ್ಥಾನಕ ಚುನಾವಣೆಗಳಲ್ಲಿ ವಿಜಯೇಂದ್ರ ತಮ್ನ ಛಾಪು ಮೂಡಿಸಲಿದ್ದಾರೆ. ಅವರಿಗೆ ಎಲ್ಲ ವಿಧದ ಯಶಸ್ಸು ಸಿಗಲಿ ಎಂದು ಹಾರೈಸುವುದಾಗಿ ತಿಳಿಸಿದರು.
ಯುವಕರಿಗೆ ಅಧ್ಯಕ್ಷ ಸ್ಥಾನ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಇಂದಲ್ಲ ನಾಳೆ ಯುವ ಪ್ರತಿಭೆಗಳು ಹೊರಹೊಮ್ಮಬೇಕು. ಅವರ ಜೊತೆ ಹಿರಿಯರು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಅದಕ್ಕೆ ನಾವು ಅನುವು ಮಾಡಿಕೊಟ್ಟು ಅವರ ಕೈಗಳನ್ನು ಬಲಪಡಿಸಬೇಕು; ಅವರಿಗೆ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು. ಶಾಸಕರಾದ ಕೃಷ್ಣಪ್ಪ, ಸಿ.ಕೆ.ರಾಮಮೂರ್ತಿ ಅವರು ಈ ಸಂದರ್ಭದಲ್ಲಿ ಇದ್ದರು.