ಉತ್ತರಾಖಾಂಡ, ನ 13 (DaijiworldNews/PC): ಉತ್ತರ ಕಾಶಿ ಜಿಲ್ಲೆಯ ಬ್ರಹ್ಮಖಾಲ್-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದ ಸುರಂಗವೊಂದು ನಿನ್ನೆ ಮುಂಜಾನೆ ಕುಸಿದ್ದಿದ್ದು ಸುಮಾರು 40 ಕಾರ್ಮಿಕರು ಒಳಗೆ ಸಿಲುಕಿಕೊಂಡಿದ್ದು, ಕಾರ್ಯಾಚರಣೆ ಮುಂದುವರೆದಿದೆ.
ಸುರಂಗದೊಳಗೆ ಸಿಲುಕಿರುವವರಿಗೆ ಆಹಾರ, ನೀರನ್ನು ಒದಗಿಸಲಾಗುತ್ತಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್), ರಾಜ್ಯ ವಿಪತ್ತು ಪರಿಹಾರ ಪಡೆ (ಎಸ್ಡಿಆರ್ಎಫ್) ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.
ಸಿಲಿಕಿಕೊಂಡ ಎಲ್ಲರೂ ಸುರಕ್ಷಿತವಾಗಿದ್ದಾರೆ, ಸಿಕ್ಕಿಬಿದ್ದಿರುವ ಕಾರ್ಮಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ. ಸುರಂಗದ ಕುಸಿದ ಭಾಗವು ಪ್ರವೇಶದ್ವಾರದಿಂದ ಸುಮಾರು 200 ಮೀಟರ್ ದೂರದಲ್ಲಿದೆ ಮತ್ತು ಸುರಂಗವನ್ನು ತೆರೆಯಲು ಇದುವರೆಗೆ ಸುಮಾರು 20 ಮೀಟರ್ ಸ್ಲ್ಯಾಬ್ ಅನ್ನು ತೆಗೆದುಹಾಕಲಾಗಿದೆ ಎಂದು ಅವರು ಹೇಳಿದರು. ಸುರಂಗದಲ್ಲಿ ಇರುವ 40 ಕಾರ್ಮಿಕರು ಸುರಕ್ಷಿತವಾಗಿದ್ದು, ಪೈಪ್ ಮೂಲಕ ಆಮ್ಲಜನಕವನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.