ಜೈಪುರ, ನ 13 (DaijiworldNews/AK): ಉದಯಪುರದಲ್ಲಿ ಟೈಲರ್ ಕನ್ಹಯ್ಯಾ ಲಾಲ್ ಅವರನ್ನು ಅಮಾನುಷವಾಗಿ ಹತ್ಯೆ ಮಾಡಿದ್ದ ಇಬ್ಬರು ಹಂತಕರಿಗೂ ಬಿಜೆಪಿಗೂ ನಂಟಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.
ಜೋಧ್ಪುರದಲ್ಲಿ ಪ್ರಚಾರದ ಜಾಥಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದಯಪುರ ಘಟನೆಗೂ ಕೆಲ ದಿನಗಳ ಮೊದಲು ಬೇರೊಂದು ಪ್ರಕರಣದಲ್ಲಿ ಪೊಲೀಸರು ಇವರಿಬ್ಬರನ್ನು ಬಂಧಿಸಿದ್ದರು. ಅವರನ್ನು ಬಿಡುಗಡೆ ಮಾಡಲು ಬಿಜೆಪಿ ನಾಯಕರು ಪೊಲೀಸ್ ಠಾಣೆಗೆ ಬಂದಿದ್ದರು ಎಂದು ಗೆಹ್ಲೋಟ್ ಗಂಭೀರ ಆರೋಪ ಮಾಡಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ ಬದಲಿಗೆ ರಾಜಸ್ಥಾನದ ಪೊಲೀಸರ ವಿಶೇಷ ಕಾರ್ಯಾಚರಣೆಯ ತಂಡ ಈ ಪ್ರಕರಣವನ್ನು ಕೈಗೆತ್ತಿಕೊಂಡರೆ ತನಿಖೆ ಸರಿಯಾದ ಹಾದಿಯಲ್ಲಿ ಸಾಗುತ್ತಿತ್ತು ಎಂದರು.
ಕಳೆದ ವರ್ಷ ಜೂನ್ 28 ರಂದು ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ವಿಷಯವನ್ನು ಪೋಸ್ಟ್ ಮಾಡಿದ್ದಕ್ಕೆ ಕನ್ಹಯ್ಯಾ ಲಾಲ್ ಅವರನ್ನು ಇಬ್ಬರು ದುಷ್ಕರ್ಮಿಗಳು ಹಗಲು ಹೊತ್ತಿನಲ್ಲಿಯೇ ಶಿರಚ್ಛೇದ ಮಾಡಿ ಕೃತ್ಯದ ವೀಡಿಯೋವನ್ನು ಮಾಡಿದ್ದರು. ಈ ಘಟನೆಯ ಭಯಾನಕ ವೀಡಿಯೋ ಕಂಡು ದೇಶಾದ್ಯಂತ ಭಾರೀ ಆಕ್ರೋಶಕ್ಕೆ ವ್ಯಕ್ತವಾಗಿತ್ತು.
ಈ ಪ್ರಕರಣವನ್ನು ಆರಂಭದಲ್ಲಿ ಉದಯಪುರದ ಧನ್ಮಂಡಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು. ಆದರೆ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ 2022ರ ಜೂನ್ 29 ರಂದು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿತ್ತು.
ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ನಾನು ಈ ವಿಷಯವನ್ನು ತಿಳಿದ ತಕ್ಷಣ ನಿಗದಿಯಾಗಿದ್ದ ಕಾರ್ಯಕ್ರಮಗಳನ್ನು ರದ್ದುಗೊಳಿಸಿ, ಉದಯಪುರಕ್ಕೆ ಹೊರಟಿದ್ದೆ. ಆದರೆ ಉದಯಪುರ ಘಟನೆಯ ಬಗ್ಗೆ ತಿಳಿದ ನಂತರವೂ ಬಿಜೆಪಿಯ ಹಲವಾರು ಉನ್ನತ ನಾಯಕರು ಹೈದರಾಬಾದ್ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಎಂದು ಗೆಹ್ಲೋಟ್ ಆರೋಪಿಸಿದ್ದಾರೆ.