ನವದೆಹಲಿ, ನ 13 (DaijiworldNews/PC): ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ದೆಹಲಿಯ ವಾಯು ಮಾಲಿನ್ಯದ ಪರಿಸ್ಥಿತಿಯನ್ನು ಕೇಳಿದ್ದೇವೆ. ಆದರೆ ದೆಹಲಿಯಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನೂ ಮೀರಿ ಜನರು ಈ ದೀಪಾವಳಿ ಹಬ್ಬದ ಸಂಧರ್ಭದಲ್ಲಿ ಹೊಡೆದ ಪಟಾಕಿಯಿಂದಾಗಿ ಅಲ್ಲಿನ ವಾಯುಮಟ್ಟ ಇನ್ನಷ್ಟು ಕಲುಷಿತ ವಾಗಿದೆ.
ದೆಹಲಿ, ನೋಯ್ಡಾ, ಗುರುಗ್ರಾಮ ಮತ್ತು ಸುತ್ತಮುತ್ತಲಿನ ಎಲ್ಲ ಪ್ರದೇಶಗಳಲ್ಲಿ ಸೋಮವಾರ ಮುಂಜಾನೆ ದಟ್ಟವಾದ ವಿಷಭರಿತ ಮಬ್ಬು ಆವರಿಸಿದ್ದು, ದೆಹಲಿಯ ವಿವಿಧೆಡೆಗಳಲ್ಲಿ ದಟ್ಟವಾದ ಮಬ್ಬು ಕವಿದ ವಾತಾವರಣದ ದೃಶ್ಯ ಕಂಡುಬರುತ್ತಿದೆ. ರಸ್ತೆಗಳಲ್ಲಿ ದಟ್ಟವಾದ ಮಬ್ಬು ಕವಿದ ಹಿನ್ನೆಲೆಯಲ್ಲಿ ಕೆಲ ಮೀಟರ್ ಗಳಾಚೆಯ ದೃಶ್ಯ ಕಾಣದ ಸ್ಥಿತಿ ನಿರ್ಮಾಣವಾಗಿದೆ.
ದೆಹಲಿಯ ಆನಂದ್ ವಿಹಾರ ಪ್ರದೇಶದಲ್ಲಿ ಗರಿಷ್ಠ ಮಟ್ಟದ ವಾಯುಮಾಲಿನ್ಯ ವರದಿಯಾಗಿದ್ದು, ವಾಯು ಗುಣಮಟ್ಟ ಸೂಚ್ಯಂಕ 969ನ್ನು ತಲುಪಿದೆ. ಎಕ್ಯೂಐ 0-50ನ್ನು ಆರೋಗ್ಯಕರ ಎಂದು ಪರಿಗಣಿಸಲಾಗುತ್ತದೆ ಹಾಗೂ 300ನ್ನು ಅಪಾಯಕಾರಿ ಮಟ್ಟ ಎಂದು ಪರಿಗಣಿಸಲಾಗುತ್ತದೆ. ಭಾನುವಾರ ಮುಂಜಾನೆ ದೆಹಲಿಯಲ್ಲಿ ಎಂಟು ವರ್ಷಗಳಲ್ಲೇ ಅತ್ಯುತ್ತಮ ವಾಯು ಗುಣಮಟ್ಟ ದಾಖಲಾಗಿತ್ತು ಹಾಗೂ ಬಿಸಿಲು ಚೆನ್ನಾಗಿತ್ತು. ನಗರದ ವಾಯುಗುಣಮಟ್ಟ ಸೂಚ್ಯಂಕ ಬೆಳಿಗ್ಗೆ 7ಕ್ಕೆ 202 ಆಗಿತ್ತು. ಇದು ಮೂರು ವಾರಗಳಲ್ಲೇ ಉತ್ತಮ ಗುಣಮಟ್ಟದ ಸೂಚ್ಯಂಕವಾಗಿತ್ತು. ಆದರೆ ಸೋಮವಾರ ಇದು 514ಕ್ಕೇರಿದೆ. ಇದು ಐಕ್ಯೂಏರ್ ನಿರ್ಧರಿಸಿರುವ ಅಪಾಯಕಾರಿ ಮಟ್ಟವಾಗಿದೆ