ನವದೆಹಲಿ, ನ 12 (DaijiworldNews/AK): ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿವರ್ಷದಂತೆ ಈ ವರ್ಷವೂ ದೀಪಾವಳಿಯನ್ನು ಸೈನಿಕರೊಂದಿಗೆ ಆಚರಿಸಲು ಚೀನಾ ಗಡಿಗೆ ಹೊಂದಿರುವ ಹಿಮಾಚಲ ಪ್ರದೇಶದ ಲೆಪ್ಚಾಗೆ ತೆರಳಿದ್ದಾರೆ.
ಭಾನುವಾರ ಬೆಳಗ್ಗೆ ದೂರದ ಗ್ರಾಮವನ್ನು ತಲುಪಿದ ಪ್ರಧಾನಿ ಮೋದಿ, ನಮ್ಮ ವೀರ ಭದ್ರತಾ ಪಡೆಗಳೊಂದಿಗೆ ದೀಪಾವಳಿಯನ್ನು ಆಚರಿಸಲು ಹಿಮಾಚಲ ಪ್ರದೇಶದ ಲೆಪ್ಚಾವನ್ನು ತಲುಪಿದ್ದೇನೆ ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೂ ಮೊದಲು ಪ್ರಧಾನಿ ಮೋದಿ,
ದೇಶದ ಜನರಿಗೆ ಒಳ್ಳೆಯ ಆರೋಗ್ಯ ಲಭಿಸಲಿ ಎಂದು ದೀಪಾವಳಿಯ ಶುಭಾಶಯಗಳನ್ನು ಕೋರಿದ್ದಾರೆ.
ಈ ವಿಶೇಷ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಒಳ್ಳೆಯ ಆರೋಗ್ಯವನ್ನು ತರಲಿ ಎಂದು ಟ್ವೀಟ್ ಮಾಡುವ ಮೂಲಕ ಜನತೆಗೆ ದೀಪಾವಳಿಯ ಸಂದೇಶವನ್ನು ಸಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ದೇಶದ ಗಡಿ ಕಾಯುವ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸುವ ಸಂಪ್ರದಾಯವನ್ನು ಹಿಂದಿನಿಂದಲೂ ಹೊಂದಿದ್ದಾರೆ.