ಹೊಸದಿಲ್ಲಿ, ಎ16(Daijiworld News/SS): ಮಹಿಳೆಯರಿಗೂ ಮಸೀದಿಗಳ ಒಳಗೆ ನಮಾಜ್ ಮಾಡಲು ಅವಕಾಶ ನೀಡುವ ಮೂಲಕ ತಾರತಮ್ಯ ಧೋರಣೆ ಕೊನೆಗಾಣಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಕೆಯಾಗಿದೆ.
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದೊಳಗೆ ಋುತುಪ್ರಾಯದ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದಾಗಲೇ ಮುಸ್ಲಿಂ ಮಹಿಳೆಯರ ಮಸೀದಿ ಪ್ರವೇಶದ ಅನುಮತಿಯ ಕೂಗೂ ಕೇಳಿ ಬಂದಿತ್ತು. ಈ ಬೆನ್ನಲ್ಲೇ, ಮುಸ್ಲಿಂ ಮಹಿಳೆಯರ ಮಸೀದಿ ಪ್ರವೇಶ ನಿರ್ಬಂಧದಿಂದ ಸಂವಿಧಾನದತ್ತವಾದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಈ ಅಕ್ರಮ ಹಾಗೂ ಅಸಾಂವಿಧಾನಿಕ ಧಾರ್ಮಿಕ ನಿಯಮವನ್ನು ತಕ್ಷಣವೇ ತೆರವುಗೊಳಿಸಬೇಕು ಎಂದು ಮುಸ್ಲಿಂ ದಂಪತಿ ಅರ್ಜಿಯಲ್ಲಿ ಕೋರಿದ್ದಾರೆ.
ಮಹಿಳೆಯರಿಗೆ ಮಸೀದಿಯೊಳಗಿನ ನಮಾಜ್ ನಿಷೇಧ ಹೇರುವ ಅನಿಷ್ಟ ಪದ್ಧತಿ ಜಾರಿಯಲ್ಲಿದೆ. ಕುರಾನ್ ಅಥವಾ ಹದಿತ್ ಯಾವುದರಲ್ಲಿಯೂ ಲಿಂಗ ತಾರತಮ್ಯದ ಬೋಧನೆಗಳಿಲ್ಲ. ಮಹಿಳೆಯ ಘನತೆಗೆ ಧಕ್ಕೆ ತಂದಿರುವ ಈ ನಿಯಮವನ್ನು ತುರ್ತಾಗಿ ತೆರವುಗೊಳಿಸಬೇಕಿದೆ ಎಂದು ಅರ್ಜಿದಾರರ ಪರ ವಕೀಲ ಅಶುತೋಷ್ ದುಬೆ ಮನವಿ ಮಾಡಿದ್ದಾರೆ.