ಬೆಂಗಳೂರು, ಏ 16(MSP): ಮತದಾನಕ್ಕೆ ಇನ್ನು ಕೇವಲ ಎರಡು ದಿನ ಮಾತ್ರ ಬಾಕಿ ಇದ್ದು, ರಾಜ್ಯದಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ ಮೊದಲ ಹಂತದಲ್ಲಿ ಮತದಾನ ನಡೆಯುವ 14 ಕ್ಷೇತ್ರಗಳಿಗೆ ಇಂದು (ಏ.16 ಮಂಗಳವಾರ ) ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದೆ. ಈ ಹಿನ್ನಲೆಯಲ್ಲಿ, ಕಾಂಗ್ರೆಸ್-ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಅಂತಿಮ ದಿನವಾದ ಇಂದು ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.
ಗುರುವಾರ ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನ ನಡೆಯಲಿದ್ದು, ಮತದಾನಕ್ಕೆ 48 ಗಂಟೆಗಳ ಮುಂಚೆ ಮಂಗಳವಾರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಕೊನೆಗೊಳ್ಳಲಿದೆ. ಇಂದು ಸಂಜೆಯವರೆಗೆ ಪ್ರಚಾರಕ್ಕೆ ಅವಕಾಶವಿರುವ ಕಾರಣ ಪಕ್ಷಗಳೆಲ್ಲವೂ ಅಬ್ಬರದ ಪ್ರಚಾರ ನಡೆಸುತ್ತಿದೆ. ಬುಧವಾರದ ಬಳಿಕ ಮನೆಗಳಿಗೆ ತೆರಳಿ ಪ್ರಚಾರ ಮಾತ್ರ ನಡೆಸಲು ಅನುಮತಿಯಿದೆ. ಬಹಿರಂಗ ಪ್ರಚಾರವಾದ ಅಂತಿಮ ದಿನವಾದ ಇಂದು ಮತದಾರರನ್ನು ತಮ್ಮತ್ತ ಓಲೈಕೆ ಮಾಡುವಲ್ಲಿ ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿದೆ. ಇನ್ನೊಂದೆಡೆ ಕೊನೇ ದಿನ ಪ್ರಚಾರಕ್ಕೆ ಬರುವಂತೆ ಅಭ್ಯರ್ಥಿಗಳು ತಮ್ಮ ತಮ್ಮ ಪಕ್ಷಗಳ ನಾಯಕರ ದುಂಬಾಲು ಬಿದ್ದಿದ್ದಾರೆ.
ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಕಾರಣ ಸ್ಥಳೀಯ ಮತದಾರರಲ್ಲದ ರಾಜಕೀಯ ನಾಯಕರೂ ಇಂದು ಸಂಜೆ 6 ಗಂಟೆ ಮೊದಲು ತಾವಿದ್ದ ಕ್ಷೇತ್ರಗಳನ್ನು ಬಿಟ್ಟು ಹೊರಡಬೇಕಾಗುತ್ತದೆ. ಇನ್ನೊಂದೆಡೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ಕೊನೆ ದಿನದ ಮೇಲೆ ಆಯೋಗ ಹದ್ದಿನಕಣ್ಣನ್ನು ಇಟ್ಟಿದೆ.